DAKSHINA KANNADA
ಆಟೋ ಬ್ಲಾಸ್ಟ್ ಪ್ರಕರಣ: ಆಟೋ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿ!
ಮಂಗಳೂರು, ನವೆಂಬರ್ 20: ನಗರದ ನಾಗುರಿಯಲ್ಲಿ ಶನಿವಾರ ಸಂಜೆ ಸುಮಾರು 4.29ಕ್ಕೆ KA19 AA8471 ಸಂಖ್ಯೆಯ ಚಲಿಸುತ್ತಿದ್ದ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ದಿಢೀರ್ ಸ್ಫೋಟ ಸಂಭವಿಸಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಮಂಗಳೂರಿಗೆಬಂದ ವೇಳೆಯೇ ಈ ನಿಗೂಢ ಸ್ಫೋಟ ನಡೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇತ್ತ ಎನ್ಐಎ ತಂಡ ಸಹ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಫೋಟದಲ್ಲಿ ಆಟೋದ ಒಳಭಾಗದಲ್ಲಿ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಪ್ರಯಾಣಿಕ ಮತ್ತು ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮಂಗಳೂರಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಲಿದ್ದಾರೆ.
ಸ್ಫೋಟದ ತೀವ್ರತೆಗೆ ಭಾರೀ ಪ್ರಮಾಣದಲ್ಲಿ ಹೊಗೆ ಹಬ್ಬಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಆಟೋ ಚಾಲಕ ಮತ್ತು ಪ್ರಯಾಣಿಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಸ್ಫೋಟಗೊಂಡಿರುವ ಆಟೋ ಒಳಗೆ ಕುಕ್ಕರ್ನೊಳಗೆ ತಯಾರಿಸುವ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಕ್ಕರ್ ಒಳಭಾಗದಲ್ಲಿ ಮ್ಯಾಟ್ ಮಾದರಿ ವಸ್ತು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ನಾಲ್ಕು ಡ್ಯೂರೆಸೆಲ್ ಬ್ಯಾಟರಿ, ಸರ್ಕೀಟ್ ಮಾದರಿಯ ವೈರ್ ಸೇರಿದಂತೆ ಬ್ಲಾಸ್ಟ್ಗೆ ಬೇಕಾದ ಸಾಧನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕ ಪ್ರೇಮ್ ರಾಜ್ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು, ತನ್ನ ಸೋದರ ಬಾಬುರಾವ್ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದಾನೆ. ಆದರೆ ಕರೆ ಮಾಡಿದ್ರೆ ಆ ವ್ಯಕ್ತಿ ಸಂಬಂಧಿಕನೇ ಅಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.