DAKSHINA KANNADA
ಆಟೋ ರಿಕ್ಷಾ ಜೀಪ್ ನಡುವೆ ಅಪಘಾತ – ಐವರು ಗಂಭೀರ

ಪುತ್ತೂರು ಜನವರಿ 29: ಆಟೋ ರಿಕ್ಷಾ ಮತ್ತು ಜೀಪ್ ನಡುವೆ ನಡೆದ ಅಪಘಾತದಲ್ಲಿ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಕೆಯ್ಯೂರು ಗ್ರಾಮದ ಪೊಯ್ಯೋಳೆ ಎಂಬಲ್ಲಿ ನಡೆದಿದೆ.
ಗಾಯಾಳುಗಳನ್ನು ರಿಕ್ಷಾದಲ್ಲಿದ್ದ ಪೊಯ್ಯೋಳೆ ನಿವಾಸಿಗಳಾದ ಪ್ರವೀಣ್, ಗುರು, ಹರ್ಷಿತ್, ಲೀಲಾ ಹಾಗೂ ಲಕ್ಷ್ಮೀ ಎಂದು ಗುರುತಿಸಲಾಗಿದ್ದು, ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಕೆಯ್ಯೂರಿನಿಂದ ದೇರ್ಲ ಕಡೆಗೆ ಹೋಗುತ್ತಿದ್ದ ಜೀಪ್ ಮತ್ತು ದೇರ್ಲ ಕಡೆಯಿಂದ ಕೆಯ್ಯೂರಿನತ್ತ ತೆರಳುತ್ತಿದ್ದ ಆಟೋ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರವೀಣ್ ಮತ್ತು ಗುರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಆಟೋ ರಿಕ್ಷಾ ಹಾಗೂ ಜೀಪ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸಂಪ್ಯ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.