FILM
ಸಿನೆಮಾ ವಿಮರ್ಶೆ ಮಾಡಿದ್ದಕ್ಕೆ ಏಳು ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳ ಮೇಲೆ ಬಿತ್ತು ಕೇಸ್
ಕೇರಳ ಅಕ್ಟೋಬರ್ 26: ಅಕ್ಟೋಬರ್ 13 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ರಾಹೆಲ್ ಮಕಾನ್ ಕೊರಾಹ್ ಎಂಬ ಮಲಯಾಳಂ ಚಿತ್ರದ ಬಗ್ಗೆ “ನಕಾರಾತ್ಮಕ ವಿಮರ್ಶೆಗಳನ್ನು” ಪೋಸ್ಟ್ ಮಾಡಿದ ಏಳು ವ್ಯಕ್ತಿಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ಕೇರಳ ಹೈಕೋರ್ಟ್ ಯಾವುದೇ ಸಿನೆಮಾ ಕುರಿತಂತೆ ವಿಮರ್ಶೆ ಹೆಸರಿನಲ್ಲಿ ಸಿನೆಮಾ ರಂಗವನ್ನು ನಾಶ ಮಾಡಬಾರದು ಹಾಗೂ ಸಿನಿಮಾ ವಿಮರ್ಶೆಗಳ ಹೆಸರಲಿ ಹಣ ಸುಲಿಗೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಡಿಜಿಪಿಗೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಕೇರಳ ಪೊಲೀಸರು ಸುಲಿಗೆ ಮತ್ತು ಸಾರ್ವಜನಿಕ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ದೈತ್ಯರಾದ ಯೂಟ್ಯೂಬ್ ಮತ್ತು ಫೇಸ್‌ಬುಕ್ ಅನ್ನು ಸಹ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿದ್ದಾರೆ. ರಾಹೆಲ್ ಮಕಲ್ ಕೋರಾ ಚಿತ್ರದ ನಿರ್ದೇಶಕರಾದ ಉಬೈನಿ ಇ ನೀಡಿದ ದೂರಿನನ್ವಯ ನಕಲಿ ಆನ್‌ಲೈನ್ ಸಿನಿಮಾ ವಿಮರ್ಶಕರ ವಿರುದ್ಧ ಕೇರಳ ಪೊಲೀಸರು ಸೆಕ್ಷನ್ 385 (ಸುಲಿಗೆ) ಮತ್ತು ಸೆಕ್ಷನ್ 120 (ಒ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಉಬೈನಿ ಇ ಅವರು, ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ನನ್ನ ಚಲನಚಿತ್ರವನ್ನು ಉದ್ದೇಶಪೂರ್ವಕವಾಗಿ ಕೆಟ್ಟದ್ದಾಗಿ ಬಿಂಬಿಸಲಾಗಿದೆ, ನನ್ನ ಚಿತ್ರಕ್ಕೆ ಅವಮಾನಿಸಲಾಗಿದೆ ಎಂದು ದೂರು ನೀಡಿದ್ದರು. ಉಬೈನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸಿನಿಮಾ ಪ್ರಚಾರ ಸಂಸ್ಥೆಯ ಮಾಲೀಕ ಹೈನ್ಸ್, ಸೋಷಿಯಲ್ ಮೀಡಿಯಾ ವಿಮರ್ಶಕ ಅರುಣ್ ತರಂಗ, ಅಸ್ವಂತ್ ಕೋಕ್, ಫೇಸ್‌ಬುಕ್ ಬಳಕೆದಾರ ಅನುಪನು6165, ಸೋಷಿಯಲ್ ಮೀಡಿಯಾ ಹ್ಯಾಂಡಲ್ ಸೋಲ್‌ಮೇಟ್ಸ್55 ಸೇರಿದಂತೆ ಹಲವು ಯೂಟ್ಯೂಬ್ ಮತ್ತು ಫೇಸ್‌ಬುಕ್ ಬಳಕೆದಾರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಅಕ್ಟೋಬರ್ 13 ರಂದು ರಾಹೆಲ್ ಮಕನ್ ಕೋರಾ ಚಿತ್ರ ಬಿಡುಗಡೆಯಾದ ಕೂಡಲೇ ಚಿತ್ರದ ವಿರುದ್ಧ ನಕಾರಾತ್ಮಕ ವಿಮರ್ಶೆಗಳನ್ನು ಹೊಂದಿರುವ ಎರಡರಿಂದ ಏಳು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಮಲಯಾಳಂ ಚಲನಚಿತ್ರೋದ್ಯಮವು ಪೊಲೀಸರ ಈ ಕ್ರಮವನ್ನು ಶ್ಲಾಘಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮಗೆ ತೋಚಿದಂತೆ ನಕಾರಾತ್ಮಕ ವಿಮರ್ಶೆಗಳ ಮೂಲಕ ಚಿತ್ರವನ್ನು ಅವಮಾನಿಸುವ ಕೃತ್ಯ ನಿಲ್ಲಿಸಬೇಕು ಎಂದು ಹೇಳಿದ್ದಾರೆ.