LATEST NEWS
ಕ್ರೀಡೆಯಲ್ಲಿ ಜೀವಮಾನದ ಸಾಧನೆಗಾಗಿ ಅಶ್ವಿನಿ ಅಕ್ಕುಂಜೆ ಗೆ ಧ್ಯಾನ್ ಚಂದ್ ಪ್ರಶಸ್ತಿ
ಉಡುಪಿ ನವೆಂಬರ್ 16: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 2022 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕ್ರೀಡೆಯಲ್ಲಿ ಜೀವಮಾನದ ಸಾಧನೆಗಾಗಿ ಕ್ರೀಡಾ ವಿಭಾಗದ ಅತ್ಯುನ್ನತ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಓಟಗಾರ್ತಿ ಅಶ್ವಿನಿ ಅಕ್ಕುಂಜೆ ಅವರಿಗೆ ಈ ಬಾರಿ ಲಭಿಸಿದೆ. ನವೆಂಬರ್ 30, 2022 ರಂದು ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರು ಭಾರತದ ರಾಷ್ಟ್ರಪತಿಗಳಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.
ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2022ಯನ್ನು ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್ ಅಚಂತಾ ಅವರಿಗೆ ಲಭಿಸಿದೆ. ಇನ್ನು 2022 ರ ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನ ಸಾಧನೆಗಾಗಿ ನೀಡುವ ಧ್ಯಾನ್ ಚಂದ್ ಪ್ರಶಸ್ತಿ ಯನ್ನು ಅಶ್ವಿನಿ ಅಕ್ಕುಂಜಿ ಸಿ (ಅಥ್ಲೆಟಿಕ್ಸ್), ಧರಂವೀರ್ ಸಿಂಗ್ (ಹಾಕಿ), ಬಿ.ಸಿ.ಸುರೇಶ್ (ಕಬಡ್ಡಿ), ನಿರ್ ಬಹದ್ದೂರ್ ಗುರುಂಗ್ (ಪ್ಯಾರಾ ಅಥ್ಲೆಟಿಕ್ಸ್) ಅವರಿಗೆ ನೀಡಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಸಿದ್ದಾಪುರದ ಅಕ್ಕುಂಜೆಯ ಯಶೋದಾ ಶೆಟ್ಟಿ ಮತ್ತು ಚಿದಾನಂದ ಶೆಟ್ಟಿಯವರ ಪುತ್ರಿ ಅಶ್ವಿನಿ ಅಕ್ಕುಂಜೆ 2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 4×400 ರಿಲೆಯಲ್ಲಿ ಚಿನ್ನ, 2011ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ 4×400 ರಿಲೆ ಮತ್ತು 400 ಹರ್ಡ್ಸಲ್‌ನಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಬಳಿಕ ಉದ್ದಿಪನಾ ಮದ್ದು ಸೇವನೆ ಆರೋಪದ ಮೇಲೆ 2 ವರ್ಷ ನಿಷೇಧಕ್ಕೊಳಗಾಗಿದ್ದರು.