DAKSHINA KANNADA
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಬಿಗ್ ರಿಲೀಫ್ – ಅತ್ಯಾಚಾರ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
ಬೆಂಗಳೂರು ಸೆಪ್ಟೆಂಬರ್ 10: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ ಈ ಸಂಬಂಧ ಪುತ್ತೂರಿನ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅರುಣ್ ಕುಮಾರ್ ಪುತ್ತಿಲ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರುಣ್ ಕುಮಾರ್ ಪುತ್ತಿಲ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ದೂರುದಾರ ಮಹಿಳೆಗೆ ಯಾವುದೇ ರೀತಿಯ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಅಗಸ್ಟ್ 28 ರಂದು ಬೆಂಗಳೂರಿನ ಸಿವಿಲ್ ನ್ಯಾಯಾಲಯ ನಿರ್ಬಂಧಕ ಆದೇಶ ಹೊರಡಿಸಿದೆ. ಇದಾದ ಬಳಿಕ ದೂರುದಾರೆ ಒಂದು ವರ್ಷದ ಹಿಂದೆ ಅಂದರೆ 2023ರ ಜೂನ್ ತಿಂಗಳಲ್ಲಿ ನಡೆದಿದೆ ಎನ್ನಲಾದ ಘಟನೆ ಸಂಬಂಧ ಈಗ ಅಂದರೆ ಸೆಪ್ಟೆಂಬರ್ 2ರಂದು ಅತ್ಯಾಚಾರ, ಲೈಂಗಿಕ ಶೋಷಣೆಯ ಆರೋಪದ ಎಫ್‌ಐಆರ್ ದಾಖಲಿಸಿದ್ದಾರೆ.
ಹಾಗಾಗಿ, ಇದೊಂದು ದುರುದ್ದೇಶಪೂರಿತ ಪ್ರಕರಣವಾಗಿದೆ. ದೂರುದಾರರ ನಡವಳಿಕೆ ಅಸಹಜ ಮತ್ತು ಅನುಮಾನಾಸ್ಪದವಾಗಿದೆ. ಮುಖ್ಯವಾಗಿ ದೂರು ದಾಖಲಿಸಲು ಒಂದೂವರೆ ವರ್ಷ ವಿಳಂಬವಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸುವಂತೆ ಹಿರಿಯ ವಕೀಲ ಪಿ.ಪಿ.ಹೆಗ್ಡೆ ವಾದಿಸಿದ್ದರು.
ಅರುಣ್ ಕುಮಾರ್ ಪುತ್ತಿಲ ಅವರು 2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್ಗೆ ಕರೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಾದ ಬಳಿಕ ಅನೇಕ ಕಡೆ ಮುಖಾಮುಖಿ ಭೇಟಿ ಮಾಡಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಹಲವು ರೀತಿಯಲ್ಲಿ ಬೆದರಿಕೆ ಹಾಗೂ ಬ್ಲಾಕ್ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅದರಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಅದನ್ನು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದರು. ಎಫ್‌ಐಆರ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದು ಪಡಿಸುವಂತೆ ಪುತ್ತಿಲ ಹೈಕೋರ್ಟ್ ಮೆಟ್ಟಿಲೇರಿದ್ದರು.