DAKSHINA KANNADA
ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕೆ- ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಕೆ..!
ಪುತ್ತೂರು, ಎಪ್ರಿಲ್ 14 : ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಬಂಡಾಯದ ಅಲೆ ಜೋರಾಗಿ ಬೀಸ ತೊಡಗಿದೆ.
ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ತಪ್ಪಿ ಬಳಿಕವಂತೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಪುತ್ತಿಲ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬುಧವಾರ ನಡೆದ ಬೃಹತ್ ಸಭೆಯಲ್ಲಿ ತೀವ್ರ ಒತ್ತಾಯ ಅಭಿಮಾನಿ, ಹಿಂದೂ ಕಾರ್ಯಕರ್ತರಿಂದ ಬಂದಿತ್ತು.
ಪುತ್ತಿಲರವರು ತಮ್ಮ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಎರಡು ದಿನದಲ್ಲಿ ತಮ್ಮ ಸ್ಪಷ್ಟ ನಿಲುವುವನ್ನು ತಿಳಿಸುತ್ತೇನೆ ಎಂದಿದ್ದರು. ಇದೀಗ ಪುತ್ತಿಲರವರು ಪುತ್ತೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರಿನಿಂದ ಕಣಕ್ಕಿಳಿಯಲು ಅರುಣ್ ಕುಮಾರ್ ಪುತ್ತಿಲ ನಿರ್ಧರಿಸಿದ್ದು, ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಪುತ್ತೂರಿನಲ್ಲಿ ಅರುಣ್ ಪುತ್ತಿಲರವರಿಗೆ ಅಭ್ಯರ್ಥಿ ಸ್ಥಾನ ನೀಡಬೇಕೆನ್ನುವುದು ಅವರ ಅಭಿಮಾನಿಗಳ ಆಶಯವಾಗಿತ್ತು.
ಅವರಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ಹಾಗೂ ಹಿಂದುತ್ವದ ಧ್ವ ನಿಯನ್ನು ಮತ್ತೆ ಮುನ್ನಲೆಗೆ ತರಲು, ಕಾರ್ಯಕರ್ತರ ಭಾವನೆಗೆ ಬೆಲೆ ನೀಡಿ ಅವರ ಪರವಾಗಿ ಕೆಲಸ ನಿರ್ವಹಿಸಲು ಅರುಣ್ ಕುಮಾರ್ ಪುತ್ತಿಲರವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷೇತರವಾಗಿ ಸ್ಪರ್ಧಿಸಲಿರುವ ಪುತ್ತಿಲರವರ ಪರವಾಗಿ ಕಾರ್ಯ ನಿರ್ವಹಿಸಲು ಸಾವಿರಾರು ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.