ಮಂಗಳೂರು ಸೆಪ್ಟೆಂಬರ್ 04: ರಾತ್ರಿ ವೇಳೆ ಧ್ವನಿ ವರ್ಧಕ ನಿಷೇಧದಿಂದಾಗಿ ಕರಾವಳಿಯಲ್ಲಿ ಸಾಂಸ್ಕೃತಿಕ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈಗ ನಾಟಕ, ಯಕ್ಷಗಾನವನ್ನು ಪೊಲೀಸರು ನಿಲ್ಲಿಸಿದ ಪೊಲೀಸರು ಮುಂದೆ ಜಾತ್ರೆಯನ್ನು ನಿಲ್ಲಿಸುತ್ತಾರೆ ಎಂದು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಹಲವು ಸಂಘಟನೆಗಳ ವತಿಯಿಂದ ಸುದ್ದಿಗೋಷ್ಟಿ ನಡೆಸಿದ್ದು ನೂರಾರು ವರ್ಷಗಳಿಂದ ಯಕ್ಷಗಾನ, ನಾಟಕ ರಂಗಭೂಮಿ ನಡೆದುಬಂದಿದೆ. ಆದರೆ ಈಗಿನ ಕಾಲದಲ್ಲಿ ಧ್ವನಿವರ್ಧಕ ಇಲ್ಲದೆ ಕಾರ್ಯಕ್ರಮ ನಡೆಸುವ ಸ್ಥಿತಿ ಇಲ್ಲ. ರಾತ್ರಿ 10 ಗಂಟೆ ನಂತರ ಧ್ವನಿ ವರ್ಧಕ ಬಳಸಬಾರದೆಂಬ ನೀತಿಯಿಂದಾಗಿ ಇದನ್ನೇ ನಂಬಿಕೊಂಡ ಕಲಾವಿದರು, ಅದಕ್ಕೆ ಸಂಬಂಧಿತ ಸೌಂಡ್ಸ್ ಲೈಟ್ಸ್, ಶಾಮಿಯಾನ, ಇನ್ನಿತರ ಎಲ್ಲ ಜನರೂ ತೊಂದರೆಗೀಡಾಗಿದ್ದಾರೆ. ಈಗ ನಾಟಕ, ಯಕ್ಷಗಾನ ಮುಂದೆ ಕೋಲ, ದೇವರ ಬಲಿಗೂ ಇಂಥದ್ದೇ ತೊಂದರೆ ಎದುರಾಗಲಿದೆ. ಅಕ್ಟೋಬರ್ ನಂತರ ಉತ್ಸವ, ಯಕ್ಷಗಾನ ಸೀಸನ್ ಶುರುವಾಗಲಿದ್ದು ಇದಕ್ಕಾಗಿ ಸರಕಾರದ ಗಮನ ಸೆಳೆಯಲು ಜನಜಾಗೃತಿ ಸಭೆ ನಡೆಸುತ್ತಿದ್ದೇವೆ ಎಂದರು.

ರಾಜ್ಯ ಸರಕಾರ 2022ರಲ್ಲಿ ಜಾರಿಗೆ ತಂದಿರುವ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗಿನ ಧ್ವನಿವರ್ಧಕ ನಿಷೇಧ ನೀತಿಯಿಂದಾಗಿ ತೊಂದರೆ ಎದುರಾಗಿದೆ, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ, ನಾಡಿದ್ದು ಜನಜಾಗೃತಿ ಸಭೆ ನಡೆಸುತ್ತಿದ್ದು, ಅದರಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಈ ವೇಳೆ ಮಾತನಾಡಿದ ಕಾನೂನು ನೆಪದಲ್ಲಿ ಕರಾವಳಿಯ ಸಾಂಸ್ಕೃತಿಕ ಅಂಗಡಿಯನ್ನೇ ಬಂದ್ ಮಾಡಲಾಗುತ್ತಿದೆ. ಮೊನ್ನೆ ಪೊಲೀಸರು ಬಂದು ಯಕ್ಷಗಾನವನ್ನು ನಿಲ್ಲಿಸುವ ದೃಶ್ಯ ಕಣ್ಣೀರು ತರಿಸುವಂತಿತ್ತು ಎಂದರು. ಶೇ.80ರಷ್ಟು ಕಲಾವಿದರು ಕಲೆಯನ್ನೇ ಬದುಕಿಗೆ ನಂಬಿಕೊಂಡಿದ್ದಾರೆ. ರಾತ್ರಿ ನಾಟಕ ಮಾಡಬಾರದು ಎಂದು ಅರ್ಧಕ್ಕೆ ನಿಲ್ಲಿಸುವ ಸ್ಥಿತಿಯಾಗಿದೆ. ಇದರಿಂದ ಜನರ ಹೊಟ್ಟೆಗೆ ಬಡಿದಂತಾಗಿದೆ ಎಂದು ದೇವದಾಸ್ ಕಾಪಿಕಾಡ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ವಿಹಿಂಪದ ಶರಣ್ ಪಂಪ್ವೆಲ್, ಪುರುಷೋತ್ತಮ್, ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.



