DAKSHINA KANNADA
ಬಿ ಕೆ ಹರಿಪ್ರಸಾದರನ್ನು ತಕ್ಷಣ ಬಂಧಿಸಿ, ಸರ್ಕಾರಕ್ಕೆ ಕಟೀಲ್ ಆಗ್ರಹ..!

ಮಂಗಳೂರು : ರಾಜ್ಯದಲ್ಲೂ ಗೋಧ್ರಾ ಮಾದರಿ ಘಟನೆ ಮರುಕಳಿಸಬಹುದು ಎಂದು ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದರನ್ನು ತಕ್ಷಣ ಬಂಧಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ, ಗೃಹ ಸಚಿವರು, ಡಿಸಿಎಂ ತಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿ ಕೆ ಹರಿಪ್ರಸಾದ್ ತಮ್ಮಲ್ಲಿರುವ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಲಿ, ಏಕೆಂದರೆ ಗೋಧ್ರಾ ಘಟನೆ ಹಿಂದೆ ಕಾಂಗ್ರೆಸ್ ಇತ್ತು. ಅಂದು ಗುಜರಾತ್ನಲ್ಲಿ ಮೋದಿ ಸರ್ಕಾರವನ್ನು ಬೀಳಿಸಬೇಕೆಂಬ ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಇಂದು ಮತ್ತೆ ಹರಿಪ್ರಸಾದ್ ಹೇಳಿಕೆ ಗಮನಿಸಿದರೆ, ಈ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತದೆ, ತಕ್ಷಣ ಬಿ ಕೆ ಹರಿಪ್ರಸಾದ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಹಿಂದೂ ರಾಷ್ಟ್ರ ಆದ ಕಾರಣಕ್ಕೆ ಈ ದೇಶದಲ್ಲಿ ಜಾತ್ಯತೀತತೆ ಉಳಿದಿದೆ. ಹಿಂದೂ ರಾಷ್ಟ್ರದ ಪರಿಣಾಮ ಈ ದೇಶ ಉಳಿದಿದೆ. ಕಾಂಗ್ರೆಸ್ ಕಾಲದಲ್ಲಿ ಈ ದೇಶದಲ್ಲಿ ಪಾಕಿಸ್ತಾನದ ತರಹದ ಆಡಳಿತವಿತ್ತು. ಆಗ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ತಾಂಡವ ಆಡುತ್ತಿತ್ತು. ಈಗ ಹಿಂದೂರಾಷ್ಟ್ರದ ಪರಿಕಲ್ಪನೆಯಡಿ ಎಲ್ಲವೂ ನಿಂತಿದೆ ಎಂದು ಕಟೀಲ್ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಕಟೀಲ್, ನಾನೂ ಕರ ಸೇವಕ, ರಾಮ ಭಕ್ತ, ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿರುವ ಸರ್ಕಾರ ಶಕ್ತಿಯಿದ್ದರೆ ನನ್ನನ್ನು ಬಂಧಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
