LATEST NEWS
ಕೋಟೆಕಾರು ವ್ಯವಸಾಯ ಬ್ಯಾಂಕ್ ನಿಂದ ಅಂದಾಜು 4 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ
ಮಂಗಳೂರು ಜನವರಿ 18: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ನಿನ್ನೆ ನಡೆದ ದರೋಡೆ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿಯಂತೆ ಅಂದಾಜು 4 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆಕೋರರನ್ನು ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ.
ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿಯಂತೆ ಕೆ.ಸಿ. ರೋಡ್ ಜಂಕ್ಷನ್‌ನ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಸಂಘದ ಶಾಖೆಗೆ ಶುಕ್ರವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರು, ಪಿಸ್ತೂಲ್, ತಲವಾರು, ಚಾಕು ಹಿಡಿದುಕೊಂಡಿದ್ದರು. ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಲಾಕರ್ (ಕಪಾಟು)ನಲ್ಲಿದ್ದ ನಗದು, ಚಿನ್ನಾಭರಣಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ’
ಪ್ರಾಥಮಿಕ ಮಾಹಿತಿಯಂತೆ ಅಂದಾಜು ₹4 ಕೋಟಿಯಷ್ಟು ದರೋಡೆ ಮಾಡಲಾಗಿದೆ. ಸಂಘದ ಅನೇಕ ಸಾಮಗ್ರಿ, ಸಿಬ್ಬಂದಿ ಮೊಬೈಲ್ ಫೋನ್‌ಗಳಿಗೆ ಹಾನಿ ಮಾಡಲಾಗಿದೆ. ದರೋಡೆಕೋರರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ. ಈ ಮಾರ್ಗದಲ್ಲಿ ದೊರೆತಿರುವ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ, ಇನ್ನಿತರ ಮಾಹಿತಿ ಕಲೆ ಹಾಕಿ ಶೀಘ್ರ ಪತ್ತೆ ಮಾಡಲಾಗುವುದು’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ದರೋಡೆ ವೇಳೆ ಬ್ಯಾಂಕ್ ಸಿಬ್ಬಂದಿ ಬೊಬ್ಬೆ ಕೇಳಿ ಬ್ಯಾಂಕ್‌ನ ಕೆಳಗಿನ ಅಂತಸ್ತಿನಲ್ಲಿರುವ ಬೇಕರಿಯಲ್ಲಿದ್ದ ಶಾಲಾ ವಿದ್ಯಾರ್ಥಿಗಳು ಓಡಿ ಬಂದಿದ್ದಾರೆ. ದರೋಡೆಕೋರರು ಈ ಸಂದರ್ಭ ಗನ್ ತೋರಿಸಿ ವಿದ್ಯಾರ್ಥಿಗಳ ಬಾಯಿ ಮುಚ್ಚುವಂತೆ ಬೆದರಿಸಿದ್ದಾರೆ. ಬಳಿಕ ಕೆ.ಸಿ.ರೋಡ್-ಮಂಗಳೂರು ರಸ್ತೆಯಲ್ಲಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕೃತ್ಯ ನಂತರ ಆರೋಪಿಗಳು ಕೇರಳದತ್ತ ಸಾಗಿದ್ದು, ತಲಪಾಡಿ ಟೋಲ್‌ಗೇಟ್‌ನಲ್ಲಿ ₹150 ಹಣ ಕೊಟ್ಟು ರಶೀದಿ ಪಡೆದುಕೊಂಡಿದ್ದಾರೆ. ನಂಬರ್ ಪ್ಲೇಟ್ ನಕಲಿಯಾಗಿದ್ದ ಕಾರಣ ಕಾರಿನಲ್ಲಿ ಫಾಸ್ಟಾಗ್ ಇರಲಿಲ್ಲ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಅಂದಾಜು ₹6 ಕೋಟಿಯಷ್ಟು ಚಿನ್ನವನ್ನು ದರೋಡೆಕೋರರು ಗಡಿಬಿಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಸುಮಾರು 12 ಕೆ.ಜಿ.ಯಷ್ಟು ಚಿನ್ನ ಸಂಘದಲ್ಲೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.