ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆ ಸುತ್ತಮುತ್ತ ಸಂಪೂರ್ಣ ಸೀಲ್ ಡೌನ್
ಮಂಗಳೂರು ಎಪ್ರಿಲ್ 23: ಬಂಟ್ವಾಳ ಮಹಿಳೆಗೆ ಕೊರೊನಾ ದೃಢವಾಗುತ್ತಿದ್ದಂತೆ ಅವರು ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮೃತ ಮಹಿಳೆಯ ಅತ್ತೆ ಕಳೆದ ಒಂದು ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಪಡೀಲ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಮೃತ ಮಹಿಳೆಯ ಅತ್ತೆಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಆಸ್ಪತೆಯಲ್ಲಿ ಚಿಕಿತ್ಸೆಗೆ ದಾಖಲಾದವರೆಲ್ಲರೂ ಕೊರೊನಾ ಶಂಕೆಯ ವ್ಯಾಪ್ತಿಗೆ ಬಂದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದವರು, ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು, ನರ್ಸ್ಗಳು ಮತ್ತು ಸಿಬ್ಬಂದಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಜೊತೆಗೆ ಕ್ವಾರಂಟೈನ್ ಮಾಡುವ ಅನಿವಾರ್ಯತೆ ಉಂಟಾಗಿದೆ.
ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಸೋಂಕು ವ್ಯಾಪ್ತಿಸದಂತೆ ವೃದ್ಧೆ ಚಿಕಿತ್ಸೆಗೆ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯನ್ನು “ಸುಪರ್ವೈಸ್ಡ್ ಐಸೋಲೆಟೆಡ್ ಸೆಂಟರ್” ಆಗಿ ಗುರುತಿಸಲಾಗಿದೆ. ಹೀಗಾಗಿ ಸೀಲ್ ಡೌನ್ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿ, ಸಿಬ್ಬಂದಿ ,ವೈದ್ಯರು , ನರ್ಸ್ ಸೇರಿದಂತೆ ಆಸ್ಪತ್ರೆಯಿಂದ ಹೊರಬರುವಂತಿಲ್ಲ. ಹಾಗೂ ಯಾರು ಕೂಡಾ ಒಳಹೋಗುವಂತಿಲ್ಲ . ಆಸ್ಪತ್ರೆಯಲ್ಲಿ ಸೀಲ್ ಡೌನ್ ವೇಳೆ ಇದ್ದವರಿಗೆ ಆಹಾರ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ ಎಂದು ತಿಳಿದುಬಂದಿದೆ
ಆಸ್ಪತ್ರೆಯ ಪೂರ್ವ ಭಾಗದಿಂದ ಕನ್ನಗುಡ್ಡೆ, ಪಶ್ಚಿಮದಿಂದ ರಮಾನಥ್ ಕೃಪಾ ರೈಸ್ ಮಿಲ್, ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73 ಮತ್ತು ದಕ್ಷಿಣಕ್ಕೆ ಸರ್ಕಾರಿ ಜಾಗದ ಸುತ್ತ ಕಂಟೋನ್ಮೆಂಟ್ ಪ್ರದೇಶ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.
ಆಸ್ಪತ್ರೆ ಜೊತೆಗೆ ಎರಡು ಮನೆ, ಐದು ಅಂಗಡಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಉಳಿದಂತೆ 5 ಕಿಲೋಮೀಟರ್ ಸುತ್ತಾಮುತ್ತಾ ಪ್ರದೇಶವನ್ನು ಬಫರ್ ಝೋನಾಗಿ ಘೋಷಣೆ ಮಾಡಲಾಗಿದೆ. ಆಸ್ಪತ್ರೆಯ ಸುತ್ತಮುತ್ತಲಿನ 5 ಕಿಲೋಮೀಟರ್ ಬಫರ್ ಝೋನ್ ಆಗಿ ಮಾರ್ಪಾಟ್ಟಿದ್ದು ಎಲ್ಲ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಉಳ್ಳಾಲ ಸೇತುವೆಯಿಂದ ಕಲ್ಲಾಪು, ಕುಡುಪು, ಫರಂಗಿಪೇಟೆ, ಫಳ್ನೀರ್ ವರೆಗಿನ ಪ್ರದೇಶ ಇದರಲ್ಲಿ ಸೇರಿದೆ. ಈ ವ್ಯಾಪ್ತಿಯಲ್ಲಿ 42 ಸಾವಿರ ಮನೆ, 1800 ಅಂಗಡಿ ಮತ್ತು ಕಚೇರಿ, 1.8 ಲಕ್ಷ ಜನರಿದ್ದು ಇವರೆಲ್ಲರೂ ಬಫರ್ ಝೋನ್ ಅಡಿಯಲ್ಲಿ ಬರುತ್ತಾರೆ.
ಬಂಟ್ವಾಳ ಒಂದೇ ಪ್ರಧೇಶದಲ್ಲಿ ಮೂರು ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಇಡಿ ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತ ಪ್ರಕರಣ 17ಕ್ಕೇರಿಕೆಯಾಗಿದೆ.