DAKSHINA KANNADA
ಜನವರಿ 4 ರಂದು ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ
ಪುತ್ತೂರು ಡಿಸೆಂಬರ್ 24: ನಗರದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ವರ್ಷಾವಧಿ ಪೂಜೆ ಹಾಗೂ ಗ್ರಾಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಜನವರಿ 4 ರಂದು ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೈವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಎ. ಕಲ್ಲಿಮಾರ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನ ಅಂದಿನ ಕಾಲದಲ್ಲಿ ವಿಜೃಂಭಣೆಯಿಂದ ನೇಮ ನಡಾವಳಿಗಳು ಜರಗುತ್ತಿದ್ದವು. ಅನಂತರ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದ ನೇಮೋತ್ಸವ ನಿಂತು ಹೋಗಿ ಜನರು ಬದುಕಿನಲ್ಲಿ ತೊಂದರೆ ಅನುಭವಿಸುವಂತಾಯಿತು. ಇದನ್ನು ಅರಿತು ಪ್ರಶ್ನಾಚಿಂತನೆ ನಡೆಸಿ 2007 ರಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಂಡು ದೈವಸ್ಥಾನ ನಿರ್ಮಿಸಿ ಬ್ರಹ್ಮಕಲಶಾಧಿಗಳು ನಡೆದು ನೇಮೋತ್ಸವ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
ನೇಮೋತ್ಸವದ ಅಂಗವಾಗಿ ಜನವರಿ 3 ಶುಕ್ರವಾರ ಸಂಜೆ 6 ಗಂಟೆಯಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಜನವರಿ 4 ಶನಿವಾರ ಬೆಳಗ್ಗೆ 7.30 ರಿಂದ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಸಾರ್ವಜನಿಕ ಆಶ್ಲೇಷ ಬಲಿ, ಪಂಚಾಮೃತಾಭಿಷೇಕ, ಶ್ರೀ ದೈವಗಳ ಸನ್ನಿಧಿಯಲ್ಲಿ ಕಲಶ ತಂಬಿಲ ಸೇವೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿದೆ ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸುಮಾರು 6 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಲಿದೆ ಎಂದು ತಿಳಿಸಿದರು.
ಸಂಜೆ 5 ಗಂಟೆಗೆ ಶ್ರೀ ದೈವಗಳ ಭಂಡಾರ ತೆಗೆದು ಗ್ರಾಮ ದೈವ ಶ್ರೀ ಅರಸು ಮುಂಡ್ಯತ್ತಾಯ, ಪರಿವಾರ ದೈವಗಳಾದ ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ಪೊಟ್ಟನ್ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ಭಾನುವಾರ ಬೆಳಗ್ಗೆ ತನಕ ನಡೆಯಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಶಾಂಕ ಕೊಟೇಚಾ, ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಉಪಸ್ಥಿತರಿದ್ದರು.