LATEST NEWS
ವಂಚನೆ ಪ್ರಕರಣ ಚೈತ್ರಾ ಕುಂದಾಪುರ ವಶಕ್ಕೆ ಪಡೆಯಲು ಕೋಟ ಪೊಲೀಸರ ಅರ್ಜಿ
ಉಡುಪಿ ಸೆಪ್ಟೆಂಬರ್ 22: ಕೋಟ್ಯಾಂತರ ರೂಪಾಯಿ ವಂಚನೆಯ ಆರೋಪಿ ಚೈತ್ರಾ ಕುಂದಾಪುರ ವಿರುದ್ಧ ದಾಖಲಾಗಿರುವ ಇನ್ನೊಂದು ಪ್ರಕರಣದಲ್ಲಿ ಆಕೆಯ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಕೋಟ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ.
ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ಗಳ ಪಂಗನಾಮ ಹಾಕಿದ ಚೈತ್ರಾ ಇದೀಗ ಬೆಂಗಳೂರು ಸಿಸಿಬಿ ಪೊಲೀಸರ ವಶದಲ್ಲಿದ್ದಾಳೆ. ಆಕೆ ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾನದ ಯುವಕನಿಗೂ 5 ಲಕ್ಷ ರೂಪಾಯಿ ವಂಚಿಸಿದ ಇನ್ನೊಂದು ಪ್ರಕರಣ ದಾಖಲಾಗಿದ್ದು, ಇದರ ತನಿಖೆಗೆ ಕೋಟ ಠಾಣೆಯ ಪೊಲೀಸರಿಗೆ ಆಕೆ ಬೇಕಾಗಿದ್ದಾಳೆ, ಮೀನು ವ್ಯಾಪಾರ ಮಾಡಿಕೊಂಡಿದ್ದ ಸುದಿನ ಎಂಬಾತನಿಗೆ, ಕೇಸರಿ ಧ್ವಜ, ಬಟ್ಟೆಗಳ ಅಂಗಡಿ ಹಾಕಿಕೊಡುವುದಾಗಿ ನಂಬಿಸಿದ್ದ ಚೈತ್ರಾ ಆತನಿಂದ 2018ರಿ೦ದ 2022ರ ವರೆಗೆ ಹಂತ ಹಂತವಾಗಿ 5 ಲಕ್ಷ ರು. ನಡೆದಿದ್ದಳು ನಂತರ ಮೋಸ ಮಾಡಿದ್ದಾಳೆ, ಹಣ ಹಿಂದಕ್ಕೆ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಳು ಎಂದು ಇದೀಗ ಸುದಿನ ಅವರು ಕೋಟ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಈ ದೂರಿನ ಹಿನ್ನೆಲೆಯಲ್ಲಿ ಕೋಟ ಠಾಣೆಯ ಪೊಲೀಸರು ಆಕೆಯ ವಿಚಾರಣೆಗೆ ತಮ್ಮ ವಶಕ್ಕೆ ಒಪ್ಪಿಸುವಂತೆ ಉಡುಪಿ ಜಿಲ್ಲಾ ನ್ಯಾಯಾಲಯದ ಮೂಲಕ ಬೆಂಗಳೂರು ಒಂದನೇ ಮುಖ್ಯ ಅಪರ ಮುಖ್ಯ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯ ಈಗಾಗಲೇ ಸೆಪ್ಟೆಂಬರ್ 23ರ ವರೆಗೆ ಆಕೆಯನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಿದ್ದು, ಪ್ರಸ್ತುತ ಪೊಲೀಸರಿಂದ ಚೈತ್ರಾಳ ವಿಚಾರಣೆ ಪೂರ್ಣಗೊಂಡಿಲ್ಲ. ಆದ್ದರಿಂದ ಕೋಟ ಠಾಣೆಯ ಪೊಲೀಸರು 23ರಂದು ನ್ಯಾಯಾಲಯ ಆದೇಶಕ್ಕೆ ಕಾಯಬೇಕಾಗಿದೆ.