UDUPI
ಪೊಲೀಸ್ ಇಲಾಖೆ ವಿರುದ್ದ ಹೇಳಿಕೆ ನಿಲ್ಲಿಸಿ ನಿಗದಿತ ದೂರು ನೀಡಿ – ಉಡುಪಿ ಎಸ್ಪಿ
ಪೊಲೀಸ್ ಇಲಾಖೆ ವಿರುದ್ದ ಹೇಳಿಕೆ ನಿಲ್ಲಿಸಿ ನಿಗದಿತ ದೂರು ನೀಡಿ – ಉಡುಪಿ ಎಸ್ಪಿ
ಉಡುಪಿ, ಅಕ್ಟೋಬರ್ 25: ಜಿಲ್ಲೆಯಲ್ಲಿನ ಸಾಂತ್ವನ ಕೇಂದ್ರಗಳ ಕರ್ತವ್ಯ ನಿರ್ವಹಣೆಗೆ ಪೂರಕವಾಗುವಂತೆ ಪೊಲೀಸ್ ಇಲಾಖೆ ನೆರವು ನೀಡಲಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಇಲಾಖೆಯ ಆದ್ಯತೆಗಳಲ್ಲೊಂದಾಗಿದ್ದು ಇಲಾಖೆ ನೊಂದವರಿಗೆ ತುರ್ತು ಸ್ಪಂದನೆ ನೀಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಂ ಪಾಟೀಲ್ ಹೇಳಿದರು.
ಇಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಂತ್ವನ ಯೋಜನೆಯ ಸಮನ್ವಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ನೊಂದವರು ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡುವ ಅಗತ್ಯವಿಲ್ಲ; ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ. ಈ ಸಂಬಂಧ ಎಲ್ಲ ಠಾಣೆಗಳಿಗೂ ಸುತ್ತೋಲೆಯನ್ನು ಕಳುಹಿಸಲಾಗುವುದು ಎಂದ ಎಸ್ ಪಿ, ದೂರು ಪಡೆಯಲು ನಿರಾಕರಿಸಿದರೆ ತಕ್ಷಣ 100ಕ್ಕೆ ಫೋನ್ ಮಾಡಿ ಎಂದರು.
ರಾತ್ರಿ ವೇಳೆ ಸಾಂತ್ವನ ಕೇಂದ್ರ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದೆಂದ ಅವರು, ಆರೋಪಿಗಳನ್ನು ಇಲಾಖೆಯವರು ಬೆಂಬಲಿಸುತ್ತಾರೆ. ದೂರು ಬಂದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.
ಸಾಂತ್ವನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸಲಹೆ ಮಾಡಿದ ಅವರು, ಇದರಿಂದ ತನಿಖೆಗೆ ನೆರವಾಗಲಿದೆ ಎಂದರು. ಸ್ಥೈರ್ಯನಿಧಿ ನೀಡಲು ಪೂರಕವಾಗುವಂತೆ ಎಫ್ ಐ ಆರ್ ಪ್ರತಿ ಮತ್ತು ಮೆಡಿಕಲ್ ವರದಿಯ ಪ್ರಥಮ ಮಾಹಿತಿ ವರದಿಯನ್ನು ಮಹಿಳಾ ಚಿಕಿತ್ಸಾ ಘಟಕಗಳಿಗೆ ಶೀಘ್ರವಾಗಿ ತಲುಪಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿಯೂ ಅವರು ಈ ಸಂದರ್ಭದಲ್ಲಿ ಮಹಿಳಾ ಚಿಕಿತ್ಸಾ ಘಟಕದ ಪ್ರತಿನಿಧಿಗಳಿಗೆ ಉತ್ತರಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಲಾಖೆಯ ವಿರುದ್ದ ಹೇಳಿಕೆಗಳನ್ನು ನೀಡದೆ ನಿಗದಿತ ದೂರನ್ನು ನೀಡಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.