LATEST NEWS
ಸಿಂಧೂ ನದಿ ಒಪ್ಪಂದ ರದ್ದು ಯುದ್ದಕ್ಕೆ ಸಮ – ಪಾಕಿಸ್ತಾನ

ಲಾಹೋರ್ ಎಪ್ರಿಲ್ 24: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಪೆಟ್ಟು ನೀಡಿದ್ದ ಭಾರತದ ಕ್ರಮಗಳಿಗೆ ಇದೀಗ ಪಾಕಿಸ್ತಾನ ಗರಂ ಆಗಿದ್ದು, 1960ರ ಸಿಂಧೂ ನದಿ ಒಪ್ಪಂದ ರದ್ದು ಮಾಡಿರುವ ಭಾರತದ ಕ್ರಮವನ್ನು ಯುದ್ದಕ್ಕೆ ಸಮ ಎಂದು ಕರೆದಿದೆ.
ಭಾರತದ ಪ್ರತೀಕಾರದ ಕ್ರಮಗಳಿಗೆ ದೇಶದ ಪ್ರತಿಕ್ರಿಯೆಯನ್ನು ರೂಪಿಸಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆದಿದೆ. ಸಭೆಯಲ್ಲಿ ಪಾಕಿಸ್ತಾನ ಪಾಲಿನ ನೀರನ್ನು ತಡೆಯಲು ಭಾರತ ಪ್ರಯತ್ನಿಸಿದ್ರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನೂ ಭಾರತ ಸರ್ಕಾರ (Indian Government) ಕಠಿಣ ನಿರ್ಧಾರ ಕೈಗೊಂಡಂತೆ ಪಾಕಿಸ್ತಾನ ಸಹ ಭಾರತ ವಿರೋಧಿ ನಿರ್ಧಾರಗಳನ್ನು ಇಂದಿನ ಪ್ರಮುಖ ಸಭೆಯಲ್ಲಿ ತೆಗೆದುಕೊಂಡಿದೆ. ಭಾರತದ ಒಡೆತನದ ಮತ್ತು ಭಾರತದ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಸೀಮೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಜೊತೆಗೆ ಭಾರತದ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ಕಡಿದುಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.