LATEST NEWS
ಗೃಹ ಸಚಿವರ ಹಿಂದೆಯೇ ರದ್ದಿಗೆ ಬಿದ್ದ ಆ್ಯಂಟಿ ಕ್ಯಮುನಲ್ ವಿಂಗ್….ಕರಾವಳಿಗೆ ಕಪ್ಪು ಚುಕ್ಕೆಯಾದ ನೈತಿಕ ಪೊಲೀಸ್ ಗಿರಿ
ಮಂಗಳೂರು ಡಿಸೆಂಬರ್ 24: ರಾಜ್ಯದ ಕೋಮು ಸೂಕ್ಷ್ಮ ಪ್ರದೇಶ ಮಂಗಳೂರಿನಲ್ಲಿ ಯುವಕ ಯುವತಿಯರು ಒಟ್ಟಿಗೆ ತಿರುಗಾಡಿದ್ರೆ ಸಾಕು ಸಂಬಂಧವೇ ಇಲ್ಲದವರು ಬಂದು ಅವರ ಮೇಲೆ ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಯುವುದು ಇದೀಗ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಹಿಂದೆ ಭಿನ್ನಕೋಮಿನ ಜೋಡಿಗಳಿಗೆ ಮಾತ್ರ ಇದ್ದ ಹಲ್ಲೆ ಪ್ರಕರಣಗಳು ಇದೀಗ ಒಂದೇ ಧರ್ಮದ ಜೋಡಿಗಳ ಮೇಲೂ ನಡೆಯಲಾರಂಭಿಸಿದೆ.
ಈ ನಡುವೆ ರಾಜ್ಯ ಸರಕಾರ ಅನೈತಿಕ ಪೊಲೀಸ್ ಗಿರಿ ಮಟ್ಟ ಹಾಕಲು ರಚಿಸಿದ್ದ ಆ್ಯಂಟಿ ಕಮ್ಯುನಲ್ ವಿಂಗ್ ಕೂಡ ಕಣ್ಮರೆಯಾಗಿದೆ. ಮಂಗಳೂರಿನಲ್ಲಿ ಇಂತಹ ಘಟನೆಗಳು ನಿರಂತರ ಎನ್ನುವ ಮಟ್ಟಿಗೆ ಬೆಳೆದು ನಿಂತಿದೆ. ಶುಕ್ರವಾರ ನಗರದಲ್ಲಿ ಅನ್ಯಕೋಮಿನ ಜೋಡಿ ಮೇಲೆ ಹಿಂದೂ ಕಾರ್ಯಕರ್ತರಿಂದ ದಾಳಿ ನಡೆದಿದೆ. ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಇದು ನಡೆದಿದೆ. ಅನ್ಯಕೋಮಿನ ಯುವಕನ ಜತೆ ಮಿಲಾಗ್ರಿಸ್ ಬಳಿ ಯುವತಿ ನಿಂತಿದ್ದಾಳೆ. ಈ ವೇಳೆ ಹಿಂದೂ ಕಾರ್ಯಕರ್ತರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಮಾತ್ರವಲ್ಲ ಹಲ್ಲೆಗೂ ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೆಲವೊಂದು ಘಟನೆಗಳ ವಿಡಿಯೋ ವೈರಲ್ ಆಗಿ ಸುದ್ದಿಯಾದರೆ , ಉಳಿದವುಗಳು ಸುದ್ದಿಯಾಗದೇ ಉಳಿಯುತ್ತಿವೆ. ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ನೈತಿಕ ಪೋಲೀಸ್ ಗಿರಿ ಮಟ್ಟ ಹಾಕುವುದರ ಜೊತೆಗೆ ಪ್ರಚೋದನಾಕಾರಿ ಭಾಷಣ, ಕೋಮು ವೈಷಮ್ಯ ಘಟನೆ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ನೈತಿಕ ಪೊಲೀಸ್‌ಗಿರಿ ನಿಯಂತ್ರಣಕ್ಕೆ ಪ್ರತ್ಯೇಕ ಕೋಮು ವಿರೋಧಿ ವಿಭಾಗ(ಆ್ಯಂಟಿ ಕಮ್ಯುನಲ್ ವಿಂಗ್) ಸ್ಥಾಪನೆ ಘೋಷಣೆ ಮಾಡಿದ್ದರು. ಅಲ್ಲದೆ ಖುದ್ದು ಗೃಹ ಸಚಿವ ಡಾ. ಜಿ ಪರಮೇಶ್ವರ್, ಮಂಗಳೂರಿಗೆ ಭೇಟಿ ಸಭೆ ನಡೆಸಿ ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕಲು ಪೊಲೀಸರಿಗೆ ಸೂಚಿಸಿದ್ದರು. ಆದರೆ ನೈತಿಕ ಪೊಲೀಸ್ ಗಿರಿ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದೆ.
‘ಆ್ಯಂಟಿ ಕಮ್ಯುನಲ್ ವಿಂಗ್’ ನಾಳೆಯೇ ಕಾರ್ಯಾಚರಿಸಲಿದೆ. ಎಲ್ಲ ರೀತಿಯ ಕೋಮು ವೈಷಮ್ಯದ ಚಟುವಟಿಕೆಗಳನ್ನು ಮಟ್ಟ ಹಾಕಲಿದೆ ಎಂದು ಗೃಹ ಸಚಿವರು ಹೇಳಿದ್ದರೂ, ದೊಡ್ಡ ಸದ್ದೇನೂ ಮಾಡಿದಂತೆ ಕಾಣುತ್ತಿಲ್ಲ. ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಅನೈತಿಕ ಗೂಂಡಾಗಿರಿ ಮುಂದುವರಿಯುತ್ತಿದೆ. ನವೆಂಬರ್ 27ರಂದು ಮಂಗಳೂರಿನಲ್ಲಿ ವಿಭಿನ್ನ ಕೋಮಿನ ಉದ್ಯೋಗಿಗಳನ್ನು ತಡೆದು ಪ್ರಶ್ನೆ, ಕಾಪುವಿನಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆ, ಆಗಸ್ಟ್ 21ರಂದು ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಸಹಪಾಠಿಗಳ ಜತೆ ಮಾತನಾಡಿದ ಕಾರಣಕ್ಕೆ ವಿದ್ಯಾರ್ಥಿಗೆ ಹಲ್ಲೆ ನಡೆದಿದೆ.
ಆಗಸ್ಟ್ 12ರಂದು ಸುಳ್ಯದಲ್ಲಿ ಅನ್ಯಧರ್ಮೀಯ ಗೆಳತಿಗೆ ನೆರವಾದ ಕಾರಣಕ್ಕೆ ವ್ಯಕ್ತಿಗೆ ಹಲ್ಲೆ, ಆಗಸ್ಟ್ 2ರಂದು ಆಟೋ ಚಾಲಕನಿಗೆ ಹಲ್ಲೆ, ಜುಲೈ 29ರಂದು ಕಾರ್ಕಳದಲ್ಲಿ ವೈದ್ಯರಿಗೆ ಹಲ್ಲೆ, ಜು.27ರಂದು ಬಂಟ್ವಾಳದ ಕಾನ್‌ಸ್ಟೆಬಲ್ ಮತ್ತು ಅವರ ಪತ್ನಿಗೆ ಹಲ್ಲೆಗೆ ಯತ್ನ, ಜುಲೈ 26ರಂದು ಕಾವೂರಿನಲ್ಲಿ ಪತ್ರಕರ್ತನ ತಡೆದು ವಿಚಾರಣೆ, ಜುಲೈ 21ರಂದು ಪಣಂಬೂರು ಬೀಚ್‌ನಲ್ಲಿ ವಿದ್ಯಾರ್ಥಿಗೆ ಕಿರುಕುಳ, ಜೂ1ರಂದು ಸೋಮೇಶ್ವರ ಬೀಚ್‌ನಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಯುವಕನಿಗೆ ಹಲ್ಲೆ ನಡೆದಿದೆ.
ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ಬಜರಂಗದಳ ಕಾರ್ಯಕರ್ತರು ಅನ್ಯಕೋಮಿನ ಜೋಡಿ ಮೇಲೆ ದಾಳಿ ಮಾಡಿದ್ದರು. ಈ ಪ್ರಕರಣಗಳು ಕೇವಲ ಸ್ಯಾಂಪಲ್ ಅಷ್ಟೇ ಆದರೆ ಪೊಲೀಸರಿಗೆ ದೂರು ಕೊಡದೆ ಹಲವು ಪ್ರಕರಣ ಮುಚ್ಚಿ ಹೋಗಿವೆ. ವಿಭಿನ್ನ ಕೋಮಿನ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಜತೆಯಾಗಿ ಸಂಚರಿಸುವುದು, ಊಟ ಮಾಡುವುದು, ಕಾಫಿ ಕುಡಿಯುವುದು ಅಪರಾಧ ಎಂಬಂತೆ ಗೂಂಡಾಗಿರಿ ತೋರುವುದು ಸಾಮಾನ್ಯವಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಕೋಮುಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಅಂಟಿಕೊಂಡು ಅಭಿವೃದ್ಧಿಗೆ ತೊಡಕಾಗಿದೆ.