DAKSHINA KANNADA
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸುಳ್ಯದ ವ್ಯಕ್ತಿಯೊಬ್ಬನ ಬಂಧನ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸುಳ್ಯದ ವ್ಯಕ್ತಿಯೊಬ್ಬನ ಬಂಧನ
ಮಂಗಳೂರು ಜುಲೈ 20: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಎಸ್ ಐಟಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ವ್ಯಕ್ತಿಯೊಬ್ಬನನ್ನು ಎಸ್ ಐ ಟಿ ತಂಡ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಳ್ಯ ತಾಲೂಕಿನ ಸಂಪಾಜೆ ಗ್ರಾಮದ ಮೋಹನ್ ನಾಯಕ್ ಎಂದು ಹೇಳಲಾಗಿದೆ. ಈತನನ್ನು ಎಸ್ ಐ ಟಿ ಬುಧವಾರದಂದು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿರುವ ಆರೋಪಿಗಳಾದ ಅಮೋಲ್ ಕಾಳೆ, ಹಾಗೂ ವಾಗ್ಮೋರೆ ಅವರಿಗೆ ಸುಕಂದಕಟ್ಟೆಯಲ್ಲಿ ಮೋಹನ್ ನಾಯಕ್ ಗೆ ಮನೆ ಕೊಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ ಐ ಟಿ ಪೊಲೀಸರ ತಂಡ ಮೋಹನ್ ನಾಯಕ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಬಂಧಿತ ಆರೋಪಿ ಮೋಹನ್ ನಾಯಕ್ ಸಂಪಾಜೆಯಲ್ಲಿ ಅಕ್ಯುಪಂಚರ್ ನ ಚಿಕಿತ್ಸೆಗೆ ಬಳಸಲಾಗುವ ಸಾಧನ ಗಳು ಸೇರಿದಂತೆ ನಾಟಿ ಔಷಧ ವನ್ನು ಮಾರಾಟಮಾಡುತ್ತಿದ್ದ ಎಂದು ಹೇಳಲಾಗಿದೆ. ಅದಲ್ಲದೇ ಸನಾಥನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಧರ್ಮ ಜಾಗೃತಿ ಸಮಾವೇಶದಲ್ಲಿ ಈತ ಭಾಗಿಯಾಗಿದ್ದ ಎಂದು ಹೇಳಲಾಗಿದೆ.