KARNATAKA
ಅಂಕೋಲಾ ಗುಡ್ಡ ಕುಸಿತ, ಮೃತದೇಹಗಳ ಪತ್ತೆಗೆ ಕೋಸ್ಟ್ ಗಾರ್ಡ್ ಸಹಾಯ ಕೇಳಿದ ಜಿಲ್ಲಾಡಳಿತ..!
ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಶಿರೂರು ಗುಡ್ಡ ಕುಸಿತದಿಂದ ಅವಶೇಷಗಳಡಿ ಸಿಲುಕಿರುವ ಮೃತದೇಹಗಳ ಪತ್ತೆಗೆ ಜಿಲ್ಲಾಡಳಿತ ಕೋಸ್ಟ್ ಗಾರ್ಡ್ ಮೊರೆ ಹೋಗಿದೆ.
ಗುಡ್ಡ ಕುಸಿತದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಕಳೆದ 5 ದಿನಗಳಿಂದ ಸಮರೋಪದಿಯಲ್ಲಿ ನಡೆಯುತ್ತಿದ್ದರೂ ಹೆಚ್ಚಿನ ಪ್ರಗತಿಯಾಗಿಲ್ಲ. ಕಠಿಣ ಭೂಪ್ರದೇಶ ಮತ್ತು ಭಾರೀ ಮಳೆಯು ರಕ್ಷಣಾ ತಂಡಕ್ಕೆ ಪ್ರಮುಖ ಅಡಚಣೆಯಾಗಿದೆ. ಆದರೂ ಭಾರಿ ಮಳೆ ಮಧ್ಯೆ ಮಣ್ಣನ್ನು ತೆರವುಗೊಳಿಸುವ ಮತ್ತು ಕಾಣೆಯಾದವರ ಹುಡುಕಾಟದ ಕೆಲಸ ಸ್ಥಳೀಯ ರಕ್ಷನಾ ತಂಡಗಳು ಮುಂದುವರೆಸಿವೆ. ದುರ್ಗಮ ಪ್ರದೇಶ, ಪ್ರತಿಕೂಲ ಹವಾಮಾನ, ಗಂಗವಳ್ಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಹೆಚ್ಚಿನ ಭೂಕುಸಿತದ ಸಾಧ್ಯತೆ ಪರಿಗಣಿಸಿ, ಜಿಲ್ಲಾಡಳಿತ ತಟ ರಕ್ಷಣಾ ಪಡೆಯ ಸಹಾಯ ಕೋರಿ ಶುಕ್ರವಾರ ಪತ್ರ ಬರೆದಿದೆ.