DAKSHINA KANNADA
ತುಳುನಾಡಿನಲ್ಲಿ ಶ್ರೀರಾಮಭಕ್ತ ಆಂಜನೇಯ ಸ್ವಾಮಿ ದೈವವಾಗುತ್ತಾನೆ..!
ತುಳುನಾಡಿನ ದೈವಾರಾಧನೆಯಲ್ಲಿ ಇತರೆ ದೈವಗಳಿಗೆ ಯಾವ ರೀತಿ ಕೋಲ ನೇಮಗಳನ್ನು ನೀಡುತ್ತಾರೋ ಅದೇ ರೀತಿಯಲ್ಲಿ ಅಂಜನೇಯನಿಗೂ ಇಲ್ಲಿ ಕೋಲ ನಡೆಸಲಾಗುತ್ತಿದೆ. ಬಲು ಅಪರೂಪದಲ್ಲಿ ಅಪರೂಪ ನಡೆಯುವ ಈ ದೈವದ ಕೋಲವು ತುಳುನಾಡಿನಲ್ಲಿ ಕೇವಲ ಎರಡೇ ಕಡೆಗಳಲ್ಲಿ ನಡೆಯುತ್ತದೆ.
ಪುತ್ತೂರು : ದೇವತಾ ಪೂಜೆಗಳಿಂದ ದೈವಾರಾಧನೆಯಲ್ಲೇ ಹೆಚ್ಚಿನ ನಿಷ್ಠೆ, ಭಕ್ತಿ, ಭಯ ತುಂಬಿಕೊಂಡವರು ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಕರಾವಳಿ ಭಾಗದ ಜನ.ಕರಾವಳಿ ಭಾಗದ ಪ್ರತಿಯೊಂದು ಕುಟುಂಬವೂ ಒಂದೊಂದು ದೈವಗಳನ್ನು ತಮ್ಮ ಕುಲದೇವರಾಗಿ ಆರಾಧಿಸಿಕೊಂಡು ಬರುತ್ತಿದೆ. ಶ್ರೀರಾಮ ಧೂತ ಹನುಮಂತನನ್ನು ಭಕ್ತರು ದೇವತಾ ರೂಪವಾಗಿಯೇ ಆರಾಧಿಸಿಕೊಂಡು ಬರುತ್ತಿದ್ದಾರೆ.ತುಳುನಾಡಿನಲ್ಲಿ 400 ಕ್ಕೂ ಮಿಕ್ಕಿ ದೈವಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಾನರ ಮೂರ್ತಿಯನ್ನು ದೈವದ ರೂಪದಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ತುಳುನಾಡಿನ ದೈವಾರಾಧನೆಯಲ್ಲಿ ಇತರೆ ದೈವಗಳಿಗೆ ಯಾವ ರೀತಿ ಕೋಲ ನೇಮಗಳನ್ನು ನೀಡುತ್ತಾರೋ ಅದೇ ರೀತಿಯಲ್ಲಿ ಅಂಜನೇಯನಿಗೂ ಇಲ್ಲಿ ಕೋಲ ನಡೆಸಲಾಗುತ್ತಿದೆ. ಬಲು ಅಪರೂಪದಲ್ಲಿ ಅಪರೂಪ ನಡೆಯುವ ಈ ದೈವದ ಕೋಲವು ತುಳುನಾಡಿನಲ್ಲಿ ಕೇವಲ ಎರಡೇ ಕಡೆಗಳಲ್ಲಿ ನಡೆಯುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಳಿಂತಾಜೆ ಮತ್ತು ಸುಳ್ಯ ತಾಲೂಕಿನ ಅಡ್ಕಾರಿನ ಅಂಜನಾದ್ರಿಯ ಶ್ರೀ ಪ್ರಸನ್ನ ಅಂಜನೇಯ ದೇವಸ್ಥಾನದಲ್ಲಿ ಆಂಜನೇಯನನ್ನು ದೈವದ ರೂಪದಲ್ಲಿ ಆರಾಧಿಸಲಾಗುತ್ತಿದೆ. ಅಲ್ಲದೆ ಇತರೆ ದೈವಗಳಿಗೆ ನೀಡುವ ನೇಮ, ಕೋಲಗಳನ್ನು ಆಂಜನೇಯನಿಗೂ ನೀಡಲಾಗುತ್ತಿದೆ. ಆದರೆ ಇತರ ಎಲ್ಲಾ ದೈವಗಳ ಕೋಲಗಳಿಂದ ಇದು ಸಂಪೂರ್ಣ ಭಿನ್ನವಾದುದು. ಹನುಮಂತನ ವೇಷಧಾರಿ ಇಲ್ಲಿ ಸಂಪೂರ್ಣ ಮೌನಿಯಾಗುತ್ತಾನೆ. ನೇಮದ ಹಿಂದಿನ ದಿನವೇ ತನ್ನ ಮೌನ ವೃತವನ್ನು ಆಚರಿಸುವ ಈತ ಕೋಲ ಮುಗಿಯುವವರೆಗೂ ಯಾರೊಂದಿಗೂ ಮಾತನಾಡುವಂತಿಲ್ಲ. ಇತನೊಂದಿಗೆ ದೈವಕ್ಕೆ ಸಹಾಯಕರಾಗಿ ಬರುವ ಇನ್ನಿಬ್ಬರೂ ಹಾಗೂ ಕೋಲ ನಡೆಸುವ ಯಜಮಾನ ದೈವಕ್ಕೆ ಬಣ್ಣ ನೀಡುವ ಕಾರ್ಯಕ್ರಮದ ಬಳಿಕ ಮಾತನಾಡುವಂತಿಲ್ಲ. ಇತರೆ ದೈವ ಕೊಲಗಳಲ್ಲಿರುವಂತೆ ಇಲ್ಲಿ ವಾದ್ಯ ಘೋಷಗಳಿಲ್ಲ, ಏನಿದ್ದರೂ ಕೇವಲ ಜಾಗಟೆ, ತಾಳ, ಚೆಂಡೆ ಮತ್ತು ಡೋಲು ಮಾತ್ರ ಇರುತ್ತೆ. ವಾನರಂತೆ ಜಿಗಿಯುತ್ತಾ ಸಾಗುವ ಹನುಮಂತ ವೇಷಧಾರಿಯ ಮುಂದೆ ಯಾರೂ ಬರುವಂತಿಲ್ಲ, ಮಾತನಾಡುವಂತಿಲ್ಲ. ಮಕ್ಕಳೂ ಸೇರಿದಂತೆ ಯಾರೂ ವೇಷಧಾರಿಯತ್ತ ಕೈ ತೋರಿಸುವಂತಿಲ್ಲ. ಅರ್ಧ ಗಂಟೆಗಳ ಕಾಲ ಇಲ್ಲಿ ಎಲ್ಲರೂ ಮೌನಿಗಳು. ಕೃಷಿ ಚಟುವಟಿಕೆಗಳಿಗೆ ಹಾಗೂ ಹನುಮಂತನಿಗೆ ನೇರ ಸಾಮ್ಯತೆ ಇದೆ ಎನ್ನುವುದನ್ನು ತೋರಿಸುವ ಈ ದೈವಕೋಲದಲ್ಲಿ ಹನುಮಂತ ವೇಷಧಾರಿಯು ಉಳುಮೆ ಮಾಡಿದ ಗದ್ದೆಯ ಬದಿಯಲ್ಲಿರುವ ಮರವನ್ನು ಹತ್ತಿ ಅದರಿಂದ ಎಲೆಗಳನ್ನು ತೆಗೆದು ಗದ್ದೆಯ ಮೇಲೆ ಹಾಕುತ್ತಾನೆ. ಎಷ್ಟು ಎಲೆಗಳು ಗದ್ದೆಯ ಮೇಲೆ ಬೀಳುತ್ತದೋ ಅದಕ್ಕಿಂತ ಹತ್ತು ಪಾಲು ಇಳುವರಿ ಈ ಗದ್ದೆಯಲ್ಲಿ ಬರುತ್ತದೆ ಎನ್ನುವುದು ಇವರ ನಂಬಿಕೆ.
ಶತಮಾನಗಳ ಹಿಂದಿನಿಂದಲೂ ಆಂಜನೇಯ ದೈವಾರಾಧನೆಯನ್ನು ಮಾಡಿಕೊಂಡು ಬಂದಿರುವ ಪುತ್ತೂರಿನ ಇಳಂತಾಜೆ ಮನೆತನ ಈ ಕುಟುಂಬಗಳ ಮಧ್ಯೆ ಇದ್ದ ಕೆಲವು ಸಮಸ್ಯೆಗಳಿಂದಾಗಿ ಈ ದೈವದ ನೇಮವು ನಿಂತು ಹೋಗಿತ್ತು. ಕುಟುಂಬದಲ್ಲಿ ಸಮಸ್ಯೆಗಳು ಜಾಸ್ತಿಯಾದಾಗ ಮತ್ತೆ ಈ ಕೋಲವನ್ನು ಮಾಡಬೇಕಾದ ಅನಿವಾರ್ಯತೆ ಈ ಕುಟುಂಬದ ಮುಂದಿದ್ದ ಕಾರಣ 2009 ನೇ ಇಸವಿಯಲ್ಲಿ ಇಳಂತಾಜೆಯಲ್ಲಿ ಆಂಜನೇಯ ಕೋಲವು ನಡೆದಿದೆ. ಅದರ ಬಳಿಕ ಇದೀಗ ಸುಳ್ಯದ ಅಡ್ಕಾರಿನ ಅಂಜನಾದ್ರಿ ಪ್ರಸನ್ನ ಅಂಜನೇಯ ಕ್ಷೇತ್ರದಲ್ಲಿ ನೇಮ ನಡೆದಿದೆ. ತಾನು ಬೆಳೆದ ಬೆಳೆಗಳಿಗೆ ಮಂಗಗಳ ಕಾಟವು ಹೆಚ್ಚಾದಾಗ ಇಲ್ಲಿನ ಜನ ಅಂಜನೇಯನ ಮೊರೆ ಹೋಗಿ ಆರಾಧನೆ ಮಾಡಿ, ಕೋಲದ ಸಮಯದಲ್ಲಿ ತಮ್ಮ ಪಾಲಿನ ಕೃಷಿ ಕಾಣಿಕೆಯನ್ನು ಅಂಜನೇಯನಿಗೆ ನೀಡುವುದು ವಾಡಿಕೆ. ಕಾಣಿಕೆ ಸ್ವೀಕರಿಸಿದ ಅಂಜನೇಯ ದೈವವು ಅದನ್ನು ಹಿಮ್ಮುಖವಾಗಿ ಎಸೆಯುವುದು ಈ ದೈವದ ನೇಮದ ವಿಶೇಷ ಆಕರ್ಷಣೆಯೂ ಆಗಿದೆ.