DAKSHINA KANNADA
14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ: ಯು.ಟಿ ಖಾದರ್
ಮಂಗಳೂರು, ಜುಲೈ 09: ಕಾನೂನು ವ್ಯಾಪ್ತಿಯಲ್ಲಿ ಪ್ರಾಣಿವಧೆಗೆ ಅವಕಾಶವಿದೆ, ಅದರ ಸ್ಪಷ್ಟ ನಿಯಮಾವಳಿ ಸರ್ಕಾರ ಜನತೆಗೆ ತಿಳಿಸಬೇಕು, ಯಾರೂ ಕಾನೂನು ಮೀರಿ ನಡೆಯಬಾರದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ಅಕ್ರಮ ಗೋಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ಹಾಕುವ ಶಾಸಕ ಡಾ. ಭರತ್ ಶೆಟ್ಟಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಾದರ್, ಯಾರೂ ಕಾನೂನು ಮೀರಿ ಹೋಗಬಾರದು. ಬಕ್ರೀದ್ ಹಿನ್ನೆಲೆಯಲ್ಲಿ ಕುರ್ಬಾನಿಯಾಗಿ 14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು.
ಪಿಎಸ್‌ಐ ಹಗರಣದ ಕುರಿತಂತೆ ಸಿಐಡಿಗೆ ಛೀಮಾರಿ ಹಾಕಿ ಅಕ್ರಮದ ತನಿಖೆಗೆ ಹೈಕೋರ್ಟ್ ಆದೇಶ ನೀಡುವುದು ಸರಕಾರದ ವೈಫಲ್ಯವಾಗಿದ್ದು, ನ್ಯಾಯಾಧೀಶರಿಗೆ ವರ್ಗಾವಣೆಯ ಬೆದರಿಕೆ ಹಾಕುವ ಪ್ರಕ್ರಿಯೆ ಗಂಭೀರ ವಿಚಾರ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.