DAKSHINA KANNADA
ಅಂಗನವಾಡಿಗಳು ಇನ್ನು ಮುಂದೆ ಪ್ಲಾಸ್ಟಿಕ್ ಶೇಖರಣಾ ಕೇಂದ್ರ
ಮಂಗಳೂರು, ಆಗಸ್ಟ್ 31 : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದ 1688 ಅಂಗನವಾಡಿ ಕೇಂದ್ರಗಳು ಇನ್ನು ಮುಂದೆ ಆಗಲಿವೆ ಪ್ಲಾಸ್ಟಿಕ್ ಶೇಖರಣಾ ಕೇಂದ್ರಗಳು.
ಅಂಗನವಾಡಿಗಳು ಮನೆಮನೆಗಳಿಂದ ಉಪಯೋಗಿಸಿದ ಪ್ಲಾಸ್ಟಿಕ್ ಸಂಗ್ರಹಿಸುವ ಕೆಲಸ ಮಾಡಬೇಕು. ಹೀಗಂತ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಕೂಡ ಹೊರಡಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ಆದೇಶ:
ಈ ಪ್ರಕ್ರಿಯೇ ಸೆಪ್ಟಂಬರ್ 9 ರಿಂದ ಜಿಲ್ಲೆಯ 230 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿಗಾಗಿ ನಡೆದ ದ.ಕ ಜಿಲ್ಲಾ ಪಂಚಾಯತ್ ವಿಶೇಷ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರಕಿದೆ. ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಈ ಕಾರ್ಯಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮನೆ ಮನೆಗಳಿಂದ ಸಂಗ್ರಹಿಸಲಾಗುವ ಶುಚಿ ಮತ್ತು ಶುಷ್ಕ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿಡಲು ಜಿಲ್ಲೆಯ 1688 ಅಂಗನವಾಡಿಗಳಿಗೆ ಸೂಚನೆ ನೀಡಲಾಗಿದೆ.
ಪ್ಲಾಸ್ಟಿಕ್ ಶೇಖರಣೆ ಹೇಗೆ ?:
ಮನೆ ಮನೆಗಳಲ್ಲಿ ಶೇಖರಿಸಿಟ್ಟ ಶುಚಿ ಮತ್ತು ಶುಷ್ಕವಾಗಿರುವ, ಮರುಬಳಕೆಗೆ ಯೋಗ್ಯವಾಗಿರುವ ಪ್ಲಾಸ್ಟಿಕ್ ವಸ್ತುಗಳಾದ ಹಾಲು ಹಾಗೂ ಹಾಲಿನ ಉತ್ಪನ್ನದ ಪ್ಯಾಕೆಟ್, ಪ್ಲಾಸ್ಟಿಕಿನಿಂದ ತಯಾರಾದ ಕೈಚೀಲಗಳು, ಬಾಟ್ಲಿಗಳು, ಹೊದಿಕೆಗಳು, ಹಾಳೆಗಳು, ತಟ್ಟೆ, ಲೋಟ, ಚಮಚ, ಸ್ಟ್ರಾ, ಡಬ್ಬಗಳು, ಬಕೆಟ್, ಮಗ್ಗ್, ಪ್ಲಾಸ್ಟಿಕ್ ಆಟದ ಸಾಮಾನು ಇತ್ಯಾದಿಗಳನ್ನು ಪ್ರತೀ ತಿಂಗಳ ಎರಡನೇ ಶನಿವಾರ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಪರಾಹ್ನ ಸಮಯವನ್ನು ನಿಗಧಿಪಡಿಸಿ ಆ ಅವಧಿಯಲ್ಲಿ ಮನೆಯ ಸದಸ್ಯರು/ಮಕ್ಕಳು ಸಮೀಪದ ಅಂಗನವಾಡಿ ಕೇಂದ್ರಕ್ಕೆ ತಂದು ನೀಡುವುದು.
ಸಂಗ್ರಹವಾದ ಪ್ಲಾಸ್ಟಿಕ್ ವಿಲೇ ಹೇಗೆ ?
ಈ ರೀತಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅದೇ ದಿನ ಸಂಜೆ ಗ್ರಾಮ ಪಂಚಾಯತ್ ಹಂತದಲ್ಲಿ ನಿರ್ಮಿಸಲಾದ ಪ್ಲಾಸ್ಟಿಕ್ ಸಂಗ್ರಹಣಾ ಶೆಡ್ಡಿನಲ್ಲಿ ಶೇಖರಿಸಿಡಲಾಗುವುದು. ಇಲ್ಲಿ ಶೇಖರಿಸಿಟ್ಟ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮೂರು ತಿಂಗಳಿಗೊಮ್ಮೆ ಮರು ಬಳಕೆ ಘಟಕದ ಸಂಸ್ಥೆಗೆ ರವಾನಿಸಲಾಗುವುದು. ಇದರಿಂದ ಬಂದ ಆದಾಯದ ಶೇಕಡ 25 ನ್ನು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಬಳಸಲು ಚಿಂತನೆ ನಡೆಸಲಾಗಿದೆ.
ಜಿಲ್ಲಾ ಪಂಚಾಯತ್ ಆದೇಶಕ್ಕೆ ಅಂಗನವಾಡಿ ಕೇಂದ್ರಗಳ ವಿರೋಧ :
ಜಿಲ್ಲಾ ಪಂಚಾಯತ್ ನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಆದೇಶಕ್ಕೆ ಅಂಗನವಾಡಿ ಕೇಂದ್ರಗಳು ತೀವೃ ವಿರೋಧ ವ್ಯಕ್ತಪಡಿಸಿವೆ. ಅಂಗನವಾಡಿ ಕೇಂದ್ರಗಳನ್ನು ತಾಜ್ಯ ಸಂಸ್ಕರಣಾ ಘಟಕಗಳನ್ನಾಗಿ ಮಾಡಲು ಬಿಡುವುದಿಲ್ಲ ಎಂದಿದ್ದಾರೆ ಜಿಲ್ಲಾ ಅಂಗನವಾಡಿ ಕೇಂದ್ರರ ಕಾರ್ಯಕರ್ತೆಯರು.
ಈ ಬಗ್ಗೆ ಇಂದು ತುರ್ತು ಸಭೆ ನಡೆಸಿ ಜಿಲ್ಲಾ ಪಂಚಾಯತ್ ನ ಪ್ಲಾಸ್ಟಿಕ್ ಸಂಗ್ರಹಿಸುವ ಆದೇಶವನ್ನು ಧಿಕ್ಕರಿಸಿ, ಪ್ರತಿಭಟಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ. ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಅಂಗನವಾಡಿಗಳು ಜಾನುವಾರು ಸಾಕುವ ದೊಡ್ಡಿಗಳಲ್ಲ ಎಂದಿದ್ದಾರೆ. ಸಣ್ಣ ಮಕ್ಕಳನ್ನು ನೋಡಿಕೊಳ್ಳುವ, ಅವರಿಗೆ ಆಹಾರ ಸಿದ್ದಪಡಿಸಿಕೊಡುವ ಮಹತ್ತರ ಜವಾಬ್ದಾರಿ ಮತ್ತು ಇತರ ಅನೇಕ ಕೆಲಸಗಳು ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇದೆ.
ಜಿಲ್ಲಾ ಪಂಚಾಯತ್ ಈ ನಿರ್ಣಯವನ್ನು ನಾವು ತೀವೃವಾಗಿ ವಿರೋಧಿಸುತ್ತೇವೆ ಮತ್ತು ಧಿಕ್ಕರಿಸುತ್ತೇವೆ ಎಂದಿದ್ದಾರೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ. ಅಂಗನವಾಡಿ ಕೇಂದ್ರಗಳನ್ನು ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರಗಳನ್ನಾಗಿ ಮಾಡಲು ಹೊರಟ ಜಿಲ್ಲಾ ಪಂಚಾಯತ್ ಆದೇಶಕ್ಕೆ ಅನೇಕರು ಅಪಸ್ವರ ಎತ್ತಿದ್ದು, ಅಂಗವಾಡಿಗಳನ್ನು ಈ ರೀತಿಯಾಗಿ ದುರ್ಬಳಕೆ ಮಾಡಬಾರದೆಂದು ಆಗ್ರಹಿಸಿದ್ದಾರೆ.