LATEST NEWS
ಕೆನಡಾದಲ್ಲಿ ದಂಪತಿ, ಪುತ್ರಿ ಸೇರಿ ಭಾರತೀಯ ಕುಟುಂಬ ಅನುಮಾನಸ್ಪದ ಸಾವು..!

ಒಟ್ಟಾವ: ಕೆನಡಾದಲ್ಲಿ ಭಾರತ ಮೂಲದ ಕುಟುಂಬವೊಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ದಂಪತಿ ಮತ್ತು ಪುತ್ರಿಯು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಅಗ್ನಿ ದುರಂತದ ಕುರಿತು ಹಲವು ಶಂಕೆ ವ್ಯಕ್ತಪಡಿಸಿದ್ದು ತನಿಖೆ ಆರಂಭಿಸಿದ್ದಾರೆ.
ಭಾರತ ಮೂಲದ ರಾಜೀವ್ ವಾರಿಕೂ (51), ಇವರ ಪತ್ನಿ ಶಿಲ್ಪಾ ಕೋಥಾ (47) ಹಾಗೂ ಪುತ್ರಿ ಮಹೇಕ್ ವಾರಿಕೂ (17) ಅವರು ಬಿಗ್ ಸ್ಕೈ ವೇ ಹಾಗೂ ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಇವರ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೂವರ ಶವಗಳು ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಹಲವು ರೀತಿಯ ಶಂಕೆ ವ್ಯಕ್ತಪಡಿಸಿದ್ದಾರೆ. ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿಲ್ಲ, ಉದ್ದೇಶಪೂರ್ವಕವಾಗಿ ನಡೆದಿರುವ ಕೃತ್ಯವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.“ರಾಜೀವ್ ವಾರಿಕೂ ಅವರ ಮನೆಯಲ್ಲಿ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿರುವ ಸಾಧ್ಯತೆ ಕಡಿಮೆ ಇದೆ. ಇದೊಂದು ಉದ್ದೇಶ ಪೂರ್ವಕ ಕೃತ್ಯ ಎಂದು ತೋರುತ್ತಿದೆ. ಹಾಗಾಗಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಉನ್ನತ ತನಿಖೆಯ ಬಳಿಕವೇ ಇವರ ಸಾವಿಗೆ ನಿಖರ ಕಾರಣ ದೊರೆಯಲಿದೆ. ಅಗ್ನಿ ದುರಂತವು ಆಕಸ್ಮಿಕವಾಗಿ ಸಂಭವಿಸಿಲ್ಲ ಎಂಬುದಾಗಿ ಒಂಟಾರಿಯೋ ಫೈರ್ ಮಾರ್ಷಲ್ ಕೂಡ ತಿಳಿಸಿದೆ” ಎಂದು ಪೊಲೀಸ್ ಕಾನ್‌ಸ್ಟೆಬಲ್ ಟರೈನ್ ಯಂಗ್ ಮಾಹಿತಿ ನೀಡಿದ್ದಾರೆ. ಇವರ ಮನೆಯಲ್ಲಿ ಸ್ಫೋಟದ ಸದ್ದು ಕೇಳಿಸಿತು ಎಂಬುದಾಗಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕುರಿತು ಕೂಡ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
