Connect with us

    DAKSHINA KANNADA

    ನ್ಯಾನೋ ಉಪಗ್ರಹ: ಆಳ್ವಾಸ್‍ನಲ್ಲಿ ಮಾಹಿತಿ ಕಾರ್ಯಾಗಾರ

    ನ್ಯಾನೋ ಉಪಗ್ರಹ: ಆಳ್ವಾಸ್‍ನಲ್ಲಿ ಮಾಹಿತಿ ಕಾರ್ಯಾಗಾರ

    ಮೂಡುಬಿದಿರೆ ಅಕ್ಟೋಬರ್ 15: ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಾಗೂ ಪ್ಲಾನೆಟ್ ಏರೋಸ್ಪೇಸ್ ಸಹಯೋಗದಲ್ಲಿ ನ್ಯಾನೋ ಉಪಗ್ರಹಗಳನ್ನು ಸಿದ್ಧಪಡಿಸುವ ಯೋಜನೆ ಆಳ್ವಾಸ್ ಸಂಸ್ಥೆಯ ಮುಂದಿದ್ದು, ಇದಕ್ಕೆ ಪೂರ್ವಭಾವಿಯಾಗಿ ನ್ಯಾನೋ ಉಪಗ್ರಹಗಳ ಕುರಿತು ಎರಡು ದಿನಗಳ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಉಪಗ್ರಹ ಕೇಂದ್ರದ ನಿವೃತ್ತ ಉಪನಿರ್ದೇಶಕ ಆರ್.ಕೆ. ರಾಜಂಗಮ್ ಮಾತನಾಡಿ, `ಹಿಂದಿನ ತಲೆಮಾರಿನ ಇಂಜಿನಿಯರ್‍ಗಳಿಗೆ ಮಾಹಿತಿ ಸಂಪನ್ಮೂಲಗಳು ಕಡಿಮೆಯಿದ್ದುದರಿಂದ ಹೆಚ್ಚಿನ ಜ್ಞಾನ ಪಡೆಯುವುದು ಅಕ್ಷರಶಃ ಸವಾಲಾಗಿತ್ತು.

    ಆದರೆ ಇಂದಿನ ಇಂಜಿನಿಯರ್‍ಗಳಿಗೆ ಅಂತಹ ಸವಾಲುಗಳಿಲ್ಲ; ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿಯಿಂದಾಗಿ ಎಲ್ಲಾ ಮಾಹಿತಿಗಳು ಅವರ ಬೆರಳ ತುದಿಯಲ್ಲಿ ಸಿಗುವಂತಾಗುತ್ತಿವೆ. ಆದರೆ ಸಿದ್ಧವಾಗಿ ಸಿಗುವ ಮಾಹಿತಿಗಿಂತ ಅನುಭವ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವವಿದ್ದು ಅದನ್ನು ಇಂದಿನ ವಿದ್ಯಾರ್ಥಿಗಳು ಪಡೆದುಕೊಳ್ಳುವುದು ತುಂಬಾ ಮುಖ್ಯ’ ಎಂದರು.

    ಇಂತಹ ಅನುಭವ ಆಧಾರಿತ ಶಿಕ್ಷಣವನ್ನು ನೀಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಿವೃತ್ತ ಇಂಜಿನಿಯರ್‍ಗಳು ಮುಂದಾಗಿದ್ದು ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ. ಉತ್ಸಾಹಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸಲು ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಬಲ್ಲದು. ಈ ಬಗೆಯ ಮಾಹಿತಿ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಜ್ಞಾನವನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, `ಇಂದಿನ ಇಂಜಿನಿಯರ್‍ಗಳನ್ನು ಮತ್ತೆ ನಮ್ಮ ಅನ್ವಯಿಕ ಪ್ರಯೋಗಗಳೊಂದಿಗೆ ಬೆಸೆಯಬೇಕಾದ ಅವಶ್ಯಕತೆಯಿದ್ದು ಅದಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸುವುದು ನಮ್ಮ ಆದ್ಯತೆಯಾಗಬೇಕಿದೆ.

    ಇದಕ್ಕಾಗಿ ಆಳ್ವಾಸ್ ಸಂಸ್ಥೆಯು `ಭುವನ್’ ಯೋಜನೆಯತ್ತ ಗಮನ ಕೇಂದ್ರೀಕರಿಸಿದ್ದು ಇಲ್ಲಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶಗಳ ಸವಾಲುಗಳು ಹಾಗೂ ಅಗತ್ಯತೆಗಳ ಬಗ್ಗೆ ಪ್ರತ್ಯಕ್ಷ ಹಾಗೂ ನಿಖರ ಮಾಹಿತಿ ನೀಡಲು ಪ್ರಯತ್ನಿಸಲಾಗುತ್ತಿದೆ. ಸಮಾಜದ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಸಿದ್ಧಪಡಿಸುವುದು ನಮ್ಮ ಗುರಿಯಾಗಿದೆ’ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *