DAKSHINA KANNADA
ಇಲ್ಲಿ ಆರಾಧಿಸುವ ದೈವ ಹೆಣ್ಣಾಗಿದ್ದರೂ, ಮಹಿಳೆಯರಿಗೆ ಪ್ರವೇಶವಿಲ್ಲ: ಇಲ್ಲಿಗೆ ಬರುವ ಭಕ್ತಾಧಿಗಳಿಗೆ ನೀರಿನಿಂದ ಹಿಡಿದು ಎಲ್ಲಾ ಆಹಾರ ಉಚಿತ!

ಪುತ್ತೂರು, ಏಪ್ರಿಲ್ 28: ಇಲ್ಲಿ ಆರಾಧಿಸಲ್ಪಡುವ ದೈವ ಸ್ವತಃ ಹೆಣ್ಣಾಗಿದ್ದರೂ,ಈ ದೈವದ ನರ್ತನವನ್ನು ಮಹಿಳೆಯರು ನೋಡುವಂತಿಲ್ಲ. ಇಲ್ಲಿಗೆ ಬರುವ ಭಕ್ತಾಧಿಗಳಿಗೆ ನೀರಿನಿಂದ ಹಿಡಿದು ಎಲ್ಲಾ ಆಹಾರ ವಸ್ತುಗಳನ್ನು ಉಚಿತವಾಗಿ ನೀಡಬೇಕು. ಹೌದು ಇಂತಹುದೊಂದು ವಿಶೇಷ ದೈವ ಕ್ಷೇತ್ರವಿರೋದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ.
ಇಂತಹುದೊಂದು ವಿಶಿಷ್ಟ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ದೈವ ಕ್ಷೇತ್ರ ಇರೋದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿರುವ ಬಲ್ನಾಡಿನಲ್ಲಿ. ಬಲ್ನಾಡು ಉಳ್ಳಾಲ್ತಿ ದಂಡನಾಯಕ ಕ್ಷೇತ್ರದಲ್ಲಿ ನಡೆಯುವ ಉಳ್ಳಾಲ್ತಿ ನೇಮೋತ್ಸವದ ನಡೆಯುವ ಸಂದರ್ಭದಲ್ಲಿ ಈ ನರ್ತನವನ್ನು ಮಹಿಳೆಯರು ನೋಡುವಂತಿಲ್ಲ ಎನ್ನುವ ಕಟ್ಟುಪಾಡು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಅಲ್ಲದೆ ಇಲ್ಲಿಗೆ ಭಕ್ತಾಧಿಗಳನ್ನು ಕರೆ ತರುವ ಆಟೋ, ಟೆಂಪೋ ಸೇರಿದಂತೆ ಯಾವುದೇ ಪ್ರಯಾಣಿಕ ಸಾಗಾಟ ವಾಹನದ ಮಂದಿ ಉಳ್ಳಾಲ್ತಿ ನೇಮೋತ್ಸವದ ದಿನ ಭಕ್ತಾಧಿಗಳನ್ನು ಉಚಿತವಾಗಿ ಕೊಂಡೊಯ್ಯುತ್ತಾರೆ. ಕ್ಷೇತ್ರದ ಅಕ್ಕಪಕ್ಕ ಹಾಕಿದ ಜ್ಯೂಸ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಉಚಿತವಾಗಿಯೇ ನೀಡಲಾಗುತ್ತದೆ.

‘ಯಾನ್ ದಂಡನಾಯಕನ ಮಚ್ಚರದ ತಂಗಡಿ, (ಮತ್ಸರದ ತಂಗಿ) ‘ ಎಂದು ಬಲ್ನಾಡು ಉಳ್ಳಾಲ್ತಿ ತನ್ನ ನುಡಿ ಕಟ್ಟಿನಲ್ಲಿ ಹೇಳುತ್ತದೆ. ಈ ಮತ್ಸರದ ಪ್ರತೀಕವೋ ಎಂಬಂತೆ ಇಲ್ಲಿ ಮಹಿಳೆಯರು ಉಳ್ಳಾಲ್ತಿ ನೇಮ ನೋಡುವುದಿಲ್ಲ. ಉಳ್ಳಾಲ್ತಿ ದೈವದ ಅಣ್ಣ ದಂಡನಾಯಕನ ನೇಮ ಮುಗಿಯುವವರೆಗೂ ಹಲವಾರು ಮಹಿಳೆಯರಿರುತ್ತಾರೆ. ಅದು ಮುಗಿದ ಕೂಡಲೇ ಮಹಿಳೆಯರೆಲ್ಲ ಅಲ್ಲಿಂದ ತೆರಳುತ್ತಾರೆ. ಸೂರ್ಯ ನೆತ್ತಿಗೆ ಬರುತ್ತಿದ್ದಂತೆ ದೈವಸ್ಥಾನದ ಒಳಗೆ ತಂಗಿ ಉಳ್ಳಾಲ್ತಿ ನೇಮ ಆರಂಭಗೊಳ್ಳುತ್ತದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೂ, ಬಲ್ನಾಡು ಉಳ್ಳಾಲ್ತಿಗೂ ಸಂಬಂಧ ಇದೆ. ಶ್ರೀ ಮಹಾಲಿಂಗೇಶ್ವರನ ಜಾತ್ರೆ ಸಂದರ್ಭದಲ್ಲಿ ಐದು ಕಿ.ಮೀ. ದೂರದಿಂದ ಉಳ್ಳಾಲ್ತಿ ಕಿರುವಾಳು ಭಂಡಾರವೂ ಮೆರವಣಿಗೆ ಮೂಲಕ ಬರುತ್ತದೆ. ದಾರಿಯುದ್ದಕ್ಕೂ ಸಾವಿರಾರು ಮಹಿಳೆಯರು ಸಹಿತ ಭಕ್ತರು ಮಲ್ಲಿಗೆ ಅರ್ಪಿಸುತ್ತಾರೆ. ಇದಾದ 12 ದಿನಗಳ ಬಳಿಕ ಅದೇ ಉಳ್ಳಾಲ್ತಿ ದೈವದ ನೇಮ ನಡೆಯುತ್ತದೆ. ಆಗ ಒಬ್ಬನೇ ಒಬ್ಬ ಮಹಿಳೆ ನೇಮ ನೋಡುವುದಿಲ್ಲ ಮಹಿಳೆಯರ ಪರವಾಗಿ ಪುರುಷರು ಮಲ್ಲಿಗೆ, ಎಳೆನೀರು, ಸೀರೆ ಸಮರ್ಪಿಸುತ್ತಾರೆ. ಅಂದ ಹಾಗೆ ಬಲ್ನಾಡು ಪರಿಸರದಲ್ಲಿ ಮಹಿಳೆಯರು ಕಾಲಿಗೆ ಬೆಳ್ಳಿ ಗೆಜ್ಜೆ ಕಟ್ಟಬಾರದು, ತಲೆಗೆ ಮಲ್ಲಿಗೆಯ ಜಲ್ಲಿ ಬಿಡಬಾರದು, ಮುಖಕ್ಕೆ ಬಣ್ಣ ಹಚ್ಚಿ ಅಭಿನಯ ಮಾಡಬಾರದು. ಮನೆಯಲ್ಲಿ ಜೋಕಾಲಿ ಕಟ್ಟಬಾರದು ಇತ್ಯಾದಿ ನಂಬಿಕೆಗಳಿವೆ.
ಭಕ್ತರು ಸಮರ್ಪಿಸಿದ ಸಾವಿರಾರು ಸೀರೆಗಳನ್ನು ಏಲಂ ಮಾಡುವ ಪದ್ಧತಿಯೂ ಇಲ್ಲಿಲ್ಲ. ಎಲ್ಲವನ್ನೂ ಭಕ್ತರಿಗೆ ಮರು ಹಂಚುವ ಕಾರ್ಯ ನಡೆಯುತ್ತದೆ.ತುಳುನಾಡಿನಲ್ಲಿ ನಡೆಯುವ ದೈವಾರಾಧನೆಯಲ್ಲಿ ಇತರ ದೈವಗಳಿಗೆ ಕಾಲಿಗೆ ಗಗ್ಗರ ಧರಿಸುವಾಗ, ಮುಖ ಕವಚ ಧರಿಸುವಾಗ ದೈವದ ಆವಾಹನೆಯಾದರೆ ಅದಕ್ಕಿಂತಲೂ ಭಿನ್ನವಾಗಿ ಇಲ್ಲಿ ಉಳ್ಳಾಲ್ತಿ ದೈವದ ದೈವಾರಾಧಕನು ಅಣಿ ಕಟ್ಟಿ ಕಾಲಿಗೆ ಗಗ್ಗರ ಧರಿಸಿ ಮೂಗಿಗೆ ವಜ್ರದ ಮೂಗುತಿ ಧರಿಸುವಾಗ ದೈವದ ಆವೇಶವಾಗುವ ಅಪೂರ್ವ ಕ್ಷಣ. ಇದು ಬಲ್ನಾಡಿನ ಕಾರ್ಣಿಕ ಕ್ಷೇತ್ರದ ವಿಶೇಷ..