LATEST NEWS
ಮರಳು ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲೆಯ ಎಲ್ಲಾ 5 ಶಾಸಕರು ಪ್ರತಿಭಟನೆಗೆ ಇಳಿಯಲಿದ್ದಾರೆ- ಕೋಟ ಶ್ರೀನಿವಾಸ ಪೂಜಾರಿ

ಮರಳು ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲೆಯ ಎಲ್ಲಾ 5 ಶಾಸಕರು ಪ್ರತಿಭಟನೆಗೆ ಇಳಿಯಲಿದ್ದಾರೆ- ಕೋಟ ಶ್ರೀನಿವಾಸ ಪೂಜಾರಿ
ಉಡುಪಿ ಅಕ್ಟೋಬರ್ 22: ರಾಜ್ಯಾದ್ಯಂತ ಮರಳಿನ ಸಮಸ್ಯೆ ವಿಪರೀತವಾಗಿದ್ದು, ಲಾರಿ, ಟಿಪ್ಪರ್ ಚಾಲಕರು ಮಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಸದ ರಾಜ್ಯ ಸರ್ಕಾರ ಸತ್ತು ಹೋಗಿದೆಯೇ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗುಡುಗಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಕ್ಟೋಬರ್ 25 ರೊಳಗೆ ಮರಳಿನ ಸಮಸ್ಯೆ ಬಗೆಹರಿಸಬೇಕು, ಈ ಮೂಲಕ ಸರಕಾರಕ್ಕೆ ಸಮಸ್ಯೆ ಬಗಹರಿಸಲು ಗಡುವು ನೀಡಲಾಗುತ್ತಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರು, ದೋಣಿ ನಡೆಸುವವರು, ವಾಹನ ಚಾಲಕರ ಜೊತೆ ಬಿಜೆಪಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುತ್ತದೆ ಎಂದು ಹೇಳಿದರು.
ಕಳೆದ ಎರಡು ದಶಕಗಳಲ್ಲಿ ಜಿಲ್ಲೆಯಲ್ಲಿ ಇಂಥ ಒಂದು ಆಡಳಿತಾತ್ಮಕ ಅವ್ಯವಸ್ಥೆಯನ್ನು ನಾನು ನೋಡಿಯೇ ಇಲ್ಲ ಎಂದು ಟೀಕಿಸಿದರು.
ಮರಳು ಸಾಗಾಟದ ಟಿಪ್ಪರ್‌ಗಳ ಮಾಲಕರು ಹಾಗೂ ಚಾಲಕರು ನಡೆಸುತ್ತಿರುವ ಮುಷ್ಕರ ಇಂದು ಐದನೇ ದಿನ ಪ್ರವೇಶಿಸಿದ್ದು, ಜಿಲ್ಲೆಯಾದ್ಯಂತ ಬೈಂದೂರಿನಿಂದ ಹೆಜಮಾಡಿಯವರೆಗೆ ಹೆದ್ದಾರಿ ಪಕ್ಕದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲುದ್ದೇಶಿಸಿದ್ದ ಅವರ ಪ್ರತಿಭಟನೆಗೆ ಜಿಲ್ಲಾಡಳಿತ ತಡೆಯೊಡ್ಡಿದೆ ಎಂದರು.
ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ವಾಹನ ಚಾಲಕರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿದರೆ, ಜಿಲ್ಲೆಯ ಎಲ್ಲಾ ಶಾಸಕರು ಅವರಿಗೆ ಬೆಂಬಲ ನೀಡಿ ಪ್ರತಿಭಟಿಸುತ್ತೇವೆ ಎಂದವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.