LATEST NEWS
ಉಡುಪಿಯಲ್ಲಿ ಇನ್ನು ಪ್ರತಿ ಗುರುವಾರ ಬಸ್ ನಲ್ಲಿ ಓಡಾಟ ನಡೆಸಲಿರುವ ಸರಕಾರಿ ಅಧಿಕಾರಿಗಳು
ಉಡುಪಿಯಲ್ಲಿ ಇನ್ನು ಪ್ರತಿ ಗುರುವಾರ ಬಸ್ ನಲ್ಲಿ ಓಡಾಟ ನಡೆಸಲಿರುವ ಸರಕಾರಿ ಅಧಿಕಾರಿಗಳು
ಉಡುಪಿ ಜೂನ್ 27: ಈಗಾಗಲೇ ಪ್ರತಿ ಗುರುವಾರ ಬಸ್ ನಲ್ಲಿ ಓಡಾಟ ನಡೆಸುತ್ತಿರುವ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಅವರು ಇನ್ನು ಜಿಲ್ಲೆಯ ಎಲ್ಲಾ ಸರಕಾರಿ ಅಧಿಕಾರಿಗಳು ಪ್ರತಿ ಗುರುವಾರ ಬಸ್ ನಲ್ಲಿ ಓಡಾಟ ನಡೆಸಬೇಕೆಂದು ಆದೇಶಿಸಿದ್ದಾರೆ.
ಪರಿಸರ ಸಂರಕ್ಷಣೆ ಬಗ್ಗೆ ಅತೀವ ಕಾಳಜಿ ಹೊಂದಿರುವ ಉಡುಪಿ ಜಿಲ್ಲಾಧಿಕಾರಿಯವರು ಸ್ವತಃ ತಾವೇ ಸರಕಾರಿ ವಾಹನ ಬಿಟ್ಟು ವಾರದಲ್ಲಿ ಒಂದು ದಿನ ಬಸ್ ನಲ್ಲಿ ಕಚೇರಿಗೆ ತೆರಳುತ್ತಿದ್ದಾರೆ.
ಪ್ರತಿ ಗುರುವಾರ ಅಧಿಕಾರಿಗಳು ಸರ್ಕಾರಿ ವಾಹನ ಉಪಯೋಗಿಸದೆ, ಬಸ್‍ನಲ್ಲಿ ಓಡಾಡೋ ಆದೇಶವನ್ನು ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಇದನ್ನು ಪಾಲಿಸುತ್ತಿದ್ದಾರೆ. ಪ್ರತೀ ಗುರುವಾರ ಬಸ್ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತದೆ. ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಸರ್ಕಾರಿ ನೌಕರರರು ಈ ಬಸ್ಸಿಗಾಗಿ ಕಾಯುತ್ತಿರಬೇಕು. ಬಸ್ ಬಂದ ಕೂಡಲೇ ಹತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಸೇರಬೇಕು ಎಂದು ಆದೇಶ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆಯಾದರೆ ಅಟೋಮ್ಯಾಟಿಕ್ ಆಗಿ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಮಾಲಿನ್ಯ ಕಡಿಮೆ ಆದರೆ ನಮ್ಮದೇ ಆರೋಗ್ಯ ಚೆನ್ನಾಗಿರುತ್ತದೆ. ಸಮಸ್ಯೆಯೂ ನಮ್ಮಿಂದನೇ ಆಗುತ್ತಿದೆ ಅದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಒಂದೇ ಸಂಸ್ಥೆಗಳಲ್ಲಿ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ಹತ್ತಿಪ್ಪತ್ತು ಜನ ಒಂದು ವಾಹನದಲ್ಲಿ ಹೋದರೆ ಅಷ್ಟೂ ವಾಹನ ಓಡಾಟ ಇರಲ್ಲ ಮತ್ತು ಇಂಧನ ಕೂಡಾ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಧಿಕಾರಿ ಅವರು ಸದ್ಯ ವಾರ್ತಾ ಇಲಾಖೆಯ ಬಸ್ಸನ್ನು ಗುರುವಾರ ಎರಡು ಟ್ರಿಪ್ ಓಡಿಸೋಕೆ ಆದೇಶಿಸಿದ್ದು. ಮುಂದೆ ಸರ್ಕಾರಿ ಬಸ್ ನ್ನು ಓಡಾಡಿಸಲು ಚಿಂತನೆ ಮಾಡಲಾಗಿದೆ.