DAKSHINA KANNADA
ಕುಡಿತ ಕ್ಷುಲ್ಲಕ ಕಾರಣ – ತನ್ನ ತಂದೆತಾಯಿಗೆ ಆಸರೆಯಾಗಿದ್ದ ಮಡದಿಯನ್ನೇ ಮುಗಿಸಿದ – ಕಣ್ಣೀರಲ್ಲಿ ಹಿರಿಯ ಜೀವಗಳು
ಸುಳ್ಯ ಜನವರಿ 18: ತನ್ನ ಮಗನಿಗೆ ಕೋವಿಯಲ್ಲಿ ಗುಂಡು ಹಾರಿಸಲು ಮುಂದಾಗಿದ್ದ ವ್ಯಕ್ತಿಯ ದಾಳಿಗೆ ಪತ್ನಿ ಸಾವನ್ನಪ್ಪಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ಗುಂಡು ದಾಳಿ ನಡೆಸಿದ ಆರೋಪಿ ಪತಿಯೂ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೆಲ್ಲೂರು ಕೆಮ್ರಾಜೆಯ ಕೋಡಿಮಜಲು ನಿವಾಸಿ ರಾಮಚಂದ್ರ ಗೌಡ (51) ಪ್ರತಿದಿನವೂ ಪತ್ನಿ ವಿನೋದ (43 ) ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದ. ಶುಕ್ರವಾರ ಅದೇ ರೀತಿಯಲ್ಲಿ ಜಗಳ ಆರಂಭವಾಗಿದ್ದು, ಜಗಳ ಬಿಡಿಸಲು ಹೋದ ದಂಪತಿಗಳ ಪ್ರಥಮ ಮಗ ಪ್ರಶಾಂತ್ (26) ಗೆ ಗುರಿಯಾಗಿಸಿ ಆತ್ಮಹತ್ಯೆ ನಡೆಸಿದ ಆರೋಪಿ ರಾಮಚಂದ್ರ ಗೌಡ ಕೋವಿ ಹಿಡಿದಿದ್ದಾನೆ. ಈ ಸಂದರ್ಭದಲ್ಲಿ ಮಗನನ್ನು ರಕ್ಷಿಸಲು ಬಂದ ಪತ್ನಿ ವಿನೋದ ಎದೆಗೆ ಗುಂಡು ತಗುಲಿದೆ. ಸ್ಥಳದಲ್ಲೇ ಮೃತಪಟ್ಟ ವಿನೋದ ಅವರನ್ನು ನೋಡಿ ಗಾಬರಿಕೊಂಡ ಆರೋಪಿ ರಾಮಚಂದ್ರ ಗೌಡ ಮನೆಯಲ್ಲೇ ಇದ್ದ ರಬ್ಬರ್ ಕ್ಲೀನ್ ಮಾಡಲು ಉಪಯೋಗಿಸುವ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ನಡೆಸಿದ್ದಾನೆ. ಆರೋಪಿ ರಾಮಚಂದ್ರ ಗೌಡರಿಗೆ ಪಿತ್ರಾರ್ಜಿತವಾಗಿ ದೊರೆತ ಸುಮಾರು 5 ಎಕರೆ ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದು, ಜೀವನಕ್ಕೆ ಬೇಕಾದಷ್ಟು ಆದಾಯವನ್ನೂ ಗಳಿಸುತ್ತಿದ್ದರು. ಆದರೆ ಮನೆಯಲ್ಲಿ ಮಾತ್ರ ಪ್ರತಿದಿನವೂ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದರು. ಈ ಕಾರಣಕ್ಕೆ ಈಗಾಗಲೇ ಈ ಪ್ರಕರಣ ಸುಳ್ಯ ಪೋಲೀಸ್ ಠಾಣೆಯ ಜೊತೆಗೆ ಹಲವು ಮಾತುಕತೆಗಳ ಹಂತಕ್ಕೂ ತಲುಪಿತ್ತು. ಮೂವರು ಗಂಡು ಮಕ್ಕಳು ಮನೆಯಿಂದ ಹೊರಗಡೆ ಕೆಲಸ ಮಾಡುತ್ತಿದ್ದು,ಮನೆಯಲ್ಲಿ ಆರೋಪಿಯ ವೃದ್ಧ ತಂದೆ ತಾಯಿ ಮತ್ತು ಪತ್ನಿ ಮಾತ್ರ ಇರುತ್ತಿದ್ದರು. ಇದೇ ಸಂದರ್ಭದಲ್ಲಿ ನೋಡಿಕೊಂಡು ಆರೋಪಿ ಪತ್ನಿ ವಿನೋದ ರಿಗೆ ಹಲ್ಲೆ ನಡೆಸಿ ವಿಕೃತಿ ಮರೆಯುತ್ತಿದ್ದ. ಈ ಗಲಾಟೆ ಇತ್ತೀಚಿನ ದಿನಗಳಲ್ಲಿ ಜೋರಾದ ಹಿನ್ನಲೆಯಲ್ಲಿ ಮೂವರು ಗಂಡು ಮಕ್ಕಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರತೀ ಬಾರಿ ಗಲಾಟೆ ಮಾಡುವ ಸಂದರ್ಭದಲ್ಲಿ ತನ್ನ ಬಳಿಯಿದ್ದ ಕೋವಿಯನ್ನು ತೋರಿಸಿ ಗುಂಡು ಹಾರಿಸುವ ಬೆದರಿಕೆಯನ್ನು ಆರೋಪಿ ರಾಮಚಂದ್ರ ಮಾಡುತ್ತಿದ್ದ. ನಿನ್ನೆ ಅದೇ ರೀತಿ ಕೋವಿ ಹಿಡಿದ ಸಂದರ್ಭದಲ್ಲಿ ಮಗ ಪ್ರಶಾಂತ್ ಅದನ್ನು ತಡೆಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಶಾಂತ್ ಗೆ ಕೋವಿಯನ್ನು ಗುರಿಯಾಗಿಟ್ಟು ಗುಂಡು ಹೊಡೆದಿದ್ದು, ಮಗನಿಗೆ ಅಡ್ಡಲಾಗಿ ತಾಯಿ ವಿನೋದ ಬಂದ ಕಾರಣ, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಗುಂಡು ಹಾರಾಟ ನಡೆಸಿದ ತಕ್ಷಣವೇ ಮಕ್ಕಳು ಪಕ್ಕದ ಮನೆಗೆ ತೆರಳಿ ನೆರೆಕೆರೆಯವರನ್ನು ಕರೆತರಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಹೆದರಿ ರಾಮಚಂದ್ರ ಗೌಡ ತನ್ನ ರಬ್ಬರ್ ತೋಟಕ್ಕೆ ಬಳಸುತ್ತಿದ್ದ ಆ್ಯಸಿಡ್ ಕುಡಿದು ಆತ್ಮಹತ್ಯೆ ನಡೆಸಿದ್ದಾನೆ. ಕೋವಿಯನ್ನು ಪ್ರತಿ ಬಾರಿಯೂ ಕೋವಿಯನ್ನು ಪ್ರದರ್ಶಿಸುತ್ತಾ ಇದ್ದ ಕಾರಣ ಸ್ಥಳೀಯರೇ ಈ ವಿಚಾರವನ್ನು ಪೋಲೀಸ್ ಗಮನಕ್ಕೆ ತಂದ ಹಿನ್ನಲೆಯಲ್ಲಿ ಪೋಲೀಸರು ಕೋವಿಯನ್ನು ಠಾಣೆಯಲ್ಲಿ ಡೆಪಾಸಿಟ್ ಇರಿಸಿಕೊಂಡಿದ್ದರು. ಆದರೆ ಕಳೆದ ಮೂರು ದಿನದ ಹಿಂದೆ ಊರಿನ ಮುಖಂಡರೊಬ್ಬರ ಮಾತಿನ ಮೇರೆಗೆ ಹಾಗು ಪತ್ನಿ ವಿನೋದ ಪೋಲೀಸರಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಕೋವಿಯನ್ನು ರಾಮಚಂದ್ರ ಗೌಡರಿಗೆ ನೀಡಲಾಗಿತ್ತು. ಇದೀಗ ವಿನೋದ ಮಾಡಿದ ಮನವಿಯ ಹಿನ್ನಲೆಯಲ್ಲಿ ದೊರೆತ ಕೋವಿಯಿಂದಲೇ ವಿನೋದ ಹತ್ಯೆಯಾಗಿದ್ದಾರೆ. ಕೋವಿ ವಿಚಾರದಲ್ಲೂ ಆರೋಪಿ ಈ ಹಿಂದೆ ಮನೆಯಲ್ಲಿ ಭಾರೀ ಗಲಾಟೆ ಮಾಡಿದ್ದು, ಕೋವಿ ಸಿಗದೇ ಹೋದಲ್ಲಿ ಮನೆಯಲ್ಲಿ ಮಾರಣ ಹೋಮ ಮಾಡುವ ಬೆದರಿಕೆಯನ್ನೂ ಒಡ್ಡಿದ್ದ.
ಜೀವನಕ್ಕೆ ಬೇಕಾದಷ್ಟು ಆದಾಯ ಇದ್ದರೂ, ಕುಡಿತ ಮತ್ತು ಕ್ಷುಲ್ಲಕ ಕಾರಣಕ್ಕೆ ಆರೋಪಿ ಮನೆಯ ನಂದಾದೀಪವನ್ನೇ ಆರಿಸಿ ತಾನೂ ಸಾವಿಗೆ ಶರಣಾಗಿದ್ದಾನೆ. ತನ್ನ ತಂದೆ ತಾಯಿಯ ಆರೋಗ್ಯ ಮಾಡುತ್ತಿದ್ದ ಪತ್ನಿಯನ್ನು ತನ್ನ ಕೈಯಾರೆ ಕೊಲ್ಲುವ ಮೂಲಕ ಹಿರಿಯ ಆಸರೆ ಇಲ್ಲದಂತೆ ಮಾಡಿದ್ದಾರೆ. ಆರೋಪಿಯ ತಂದೆ ತಾಯಿ ಮಗ ಸತ್ತಿರುವುದಕ್ಕಿಂತ ಹೆಚ್ಚಿಗೆ ಮಗಳಂತೆ ಇದ್ದ ಸೊಸೆಯನ್ನು ಕಳೆದುಕೊಂಡ ಬೇಸರದಲ್ಲಿದ್ದಾರೆ.