DAKSHINA KANNADA
ಉಪ್ಪಿನಂಗಡಿ – ಅಕ್ಷರ ದಾಸೋಹದ ಅನ್ನ ಚರಂಡಿಗೆ ಎಸೆದು ಬೇಜವಾಬ್ದಾರಿ
ಉಪ್ಪಿನಂಗಡಿ ಜುಲೈ 03: ಮಕ್ಕಳಿಗೆ ನೀಡುವ ಅಕ್ಷರ ದಾಸೋಹದ ಅನ್ನವನ್ನು ಚರಂಡಿಗೆ ಎಸೆಯುತ್ತಿರುವ ಪ್ರಕರಣ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ಸರ್ಕಾರಿ ಮಾದರಿ ಉನ್ನತ ಶಿಕ್ಷಣ ಶಾಲೆಯಲ್ಲಿ ಅಕ್ಷರ ದಾಸೋಹದ ಅನ್ನವನ್ನು ಪ್ರತಿನಿತ್ಯ ರಸ್ತೆ ಬದಿ ಇರುವ ಚರಂಡಿಗೆ ಎಸೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪ್ಪಿನಂಗಡಿಯ ಸರ್ಕಾರಿ ಮಾದರಿ ಉನ್ನತ ಶಿಕ್ಷಣ ಶಾಲೆಯಲ್ಲಿ ಅಕ್ಷರ ದಾಸೋಹಕ್ಕೆ ಬಿಳಿ ಅಕ್ಕಿಯನ್ನು ಉಪಯೋಗಿಸುತ್ತಿದ್ದು, ಇದನ್ನು ತಿಂದ ಮಕ್ಕಳಿಗೆ ಹೊಟ್ಟೆನೋವಾಗುತ್ತದೆ ಎಂದು ಮಕ್ಕಳು ಆರೋಪಿಸಿದ್ದು, ಹೀಗಾಗಿ ಮಕ್ಕಳು ಮನೆಯಿಂದಲೇ ಊಟವನ್ನು ತರುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇದ್ದರೂ ಶಾಲೆಯಲ್ಲಿ ಹೆಚ್ಚಾಗಿಯೇ ಅನ್ನವನ್ನು ಮಾಡಿ ಬಳಿಕ ಮಕ್ಕಳು ತಿಂದಿಲ್ಲ ಎಂದು ಅದನ್ನು ರಸ್ತೆ ಬದಿಯಲ್ಲಿಯ ಚರಂಡಿಗೆ ಎಸೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಪ್ರತಿನಿತ್ಯ ರಸ್ತೆ ಬದಿಯ ಚರಂಡಿಗೆ ಅನ್ನವನ್ನ ಎಸೆಯುತ್ತಿರುವ ಹಿನ್ನಲೆ ಚರಂಡಿ ಬ್ಲಾಕ್ ಆಗಿ ಗಬ್ಬು ನಾರುತ್ತಿರುವ ಸ್ಥಿತಿಗೆ ಬಂದಿದೆ. ಅಲ್ಲದೆ ಮಳೆಗಾಲದ ಸಮಯ ಕಾರಣ ಚರಂಡಿಯಲ್ಲಿ ಸೊಳ್ಳೆ ಹೆಚ್ಚಾಗಿ ಡೆಂಗ್ಯೂ ಭೀತಿ ಕೂಡ ಉಂಟಾಗಿದೆ. ಶಾಲೆಯ ಸಿಬ್ಬಂದಿ ಈ ರೀತಿಯಾಗಿ ತಿನ್ನುವ ಅನ್ನವನ್ನು ಚರಂಡಿಗೆ ಎಸೆದು ವ್ಯರ್ಥಮಾಡುತ್ತಿರುವುದಕ್ಕೆ ಸಾರ್ವಜನಿಕರ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.