BELTHANGADI
ಧರ್ಮಸ್ಥಳ – ಪಂಜಾಬ್ ನಲ್ಲಿ ನಿಗೂಢವಾಗಿ ಸಾವನಪ್ಪಿದ ಆಕಾಂಕ್ಷಾ ಅಂತ್ಯಸಂಸ್ಕಾರ

ಉಜಿರೆ ಮೇ 21: ಪಂಜಾಬ್ ನಲ್ಲಿ ನಿಗೂಢ ಕಾರಣಕ್ಕೆ ಕಟ್ಟಡದಿಂದ ಬಿದ್ದು ಆತ್ಮಹತ್ಯೆಗೆ ಶರಣಾದ ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ ಆಕಾಂಕ್ಷಾ (22) ಅವರ ಅಂತ್ಯ ಸಂಸ್ಕಾರವು ಧರ್ಮಸ್ಥಳದ ಬೊಳಿಯಾರಿನಲ್ಲಿರುವ ಕುಟುಂಬದ ಮನೆಯಲ್ಲಿ ಬುಧವಾರ ನೆರವೇರಿತು.
ಬೆಳಗ್ಗೆ 9 ಗಂಟೆಯ ಸುಮಾರಿಗೆ ಮೃತದೇಹ ಮನೆಗೆ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ರಾತ್ರಿಯ ವೇಳೆ ಬೆಂಗಳೂರಿಗೆ ವಿಮಾನದ ಮೂಲಕ ತರಲಾಗಿದ್ದ ಮೃತದೇಹವನ್ನು ಅಲ್ಲಿಂದ ಧರ್ಮಸ್ಥಳಕ್ಕೆ ಆ್ಯಂಬುಲೆನ್ಸ್ ನಲ್ಲಿ ತರಲಾಯಿತು.

ಮನೆಯ ಅಂಗಳದಲ್ಲಿ ಮೃತದೇಹದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ನೂರಾರು ಮಂದಿ ಸ್ಥಳೀಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಪಾರ್ಥಿವ ಶರೀರವನ್ನು ಮನೆಯ ಅಂಗಳಕ್ಕೆ ತಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಕಾಂಕ್ಷಾ ಅವರ ತಾಯಿ ಸಿಂಧೂದೇವಿ, ‘ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಪಂಜಾಬಿನ ಪ್ರೊಫೆಸರ್ ದಂಪತಿ ಸಂಚು ಮಾಡಿ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಸಿಂಧೂದೇವಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಹರೀಶ್ ಪೂಂಜ ಅವರು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಗೃಹಸಚಿವರ ಮೂಲಕ ಪಂಜಾಬ್ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಭರವಸೆ ನೀಡಿದರು.