LATEST NEWS
AK-203 ರೈಫಲ್: ನಿಮಿಷಕ್ಕೆ 700 ಗುಂಡುಗಳು 800 ಮೀಟರ್ ಗಳಷ್ಟು ವ್ಯಾಪ್ತಿ!

ಉತ್ತರಪ್ರದೇಶ, ಜುಲೈ 18: ಭಾರತೀಯ ಸಶಸ್ತ್ರ ಪಡೆಗೆ ಕಲಾಶ್ರೀಕೋವ್ ಸರಣಿಯ ಅತ್ಯಾಧುನಿಕ ಆವೃತ್ತಿಯ ನೂತನ AK-203 ರೈಫಲ್ ಸರಬರಾಜು ಮಾಡಲು ಕಂಪನಿ ಸಜ್ಜಾಗಿದ್ದು, ಈ ರೈಫಲ್ ಕೇವಲ ಒಂದು ನಿಮಿಷದಲ್ಲಿ 700 ಗುಂಡುಗಳು ಹಾರಲಿದ್ದು, ಇದು 800 ಮೀಟರ್ ಗಳಷ್ಟು ದೂರ ಕ್ರಮಿಸಬಲ್ಲದು.
ಉತ್ತರಪ್ರದೇಶದ ಅಮೇಠಿಯಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಜಂಟಿ ಸಹಭಾಗಿತ್ವದ ಕಂಪನಿ ದೇಶೀಯವಾಗಿ ಈ ಎಕೆ 203 ಕಲಾಶ್ರಿಕೋವ್ ರೈಫಲ್ಸ್ ಅನ್ನು ಉತ್ಪಾದನೆ ಮಾಡಿದ್ದು, ಭಾರತದಲ್ಲಿ ಇದಕ್ಕೆ “ಶೇರ್”(ಸಿಂಹ) ಎಂದು ಹೆಸರಿಡಲಾಗಿದೆ.

ಈ ಕಂಪನಿಯು 5,200 ಕೋಟಿ ರೂಪಾಯಿ ಒಪ್ಪಂದದ ಅನ್ವಯ ಭಾರತೀಯ ಸೇನಾ ಪಡೆಗೆ ಆರು ಲಕ್ಷಕ್ಕೂ ಅಧಿಕ ರೈಫಲ್ಸ್ ಸರಬರಾಜು ಮಾಡಬೇಕಾಗಿದೆ. ಐಆರ್ ಆರ್ ಪಿಎಲ್ ಮುಖ್ಯಸ್ಥ ಮೇಜರ್ ಜನರಲ್ ಎಸ್.ಕೆ. ಶರ್ಮಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, 2030ರ ಡಿಸೆಂಬರ್ ಒಳಗೆ ಪೂರ್ಣಪ್ರಮಾಣದಲ್ಲಿ ರೈಫಲ್ಸ್ ಸರಬರಾಜು ಮಾಡಲಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನಾಪಡೆಗೆ ಈವರೆಗೆ 48,000 ಎಕೆ 203 ರೈಫಲ್ಸ್ ಸರಬರಾಜು ಮಾಡಿದೆ. ಮುಂದಿನ ಎರಡು, ಮೂರು ವಾರಗಳಲ್ಲಿ 7,000 ರೈಫಲ್ಸ್ ಹಸ್ತಾಂತರಿಸಲಿದ್ದು, ಈ ವರ್ಷದ ಡಿಸೆಂಬರ್ ನೊಳಗೆ ಹೆಚ್ಚುವರಿಯಾಗಿ 15,000 ರೈಫಲ್ಸ್ ಸರಬರಾಜು ಮಾಡಲಿದೆ ಎಂದು ಶರ್ಮಾ ಅವರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
AK-203 ಶೇರ್ ರೈಫಲ್ಸ್ ವೈಶಿಷ್ಟ್ಯ
ಕಲಾಶ್ರಿಕೋವ್ ಸರಣಿಯ ಎಕೆ-47 ಮತ್ತು ಎಕೆ 56 ರೈಫಲ್ಸ್ ಗಿಂತ ಎಕೆ-203 ಗಮನಾರ್ಹವಾಗಿ ಹೆಚ್ಚು ಅತ್ಯಾಧುನಿಕವಾಗಿದೆ. ಇದು ಕಲಾಶ್ರಿಕೋವ್ ಸರಣಿಯ ಅತ್ಯಂತ ಮಾರಕ ರೈಫಲ್ಸ್ ಗಳಲ್ಲಿ ಒಂದಾಗಿದೆ. ಮೂರು ದಶಕಕ್ಕಿಂತಲೂ ಹೆಚ್ಚು ಕಾಲ ಸೇವೆಯಲ್ಲಿರುವ ಭಾರತೀಯ ಸಣ್ಣ ಶಸ್ತ್ರಾಸ್ತ್ರ ವ್ಯವಸ್ಥೆಯ (INSAS) ರೈಫಲ್ಸ್ ಗಳ ಸ್ಥಾನಕ್ಕೆ ಎಕೆ 203 ಬರಲಿದೆ. ಐಎನ್ ಎಸ್ ಎಎಸ್ ನಲ್ಲಿ 5.56X45 ಎಂಎಂ ಗುಂಡು ಹೊಂದಿದ್ದು, ಎಕೆ 203ನಲ್ಲಿ 7.62X39 ಎಂಎಂ ಗುಂಡು ಹೊಂದಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮತ್ತು ಗಲಭೆ ನಿಗ್ರಹಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ರೈಫಲ್ ಅನ್ನು ಉತ್ಪಾದಿಸಲಾಗಿದೆ. ಎಕೆ 203 ರೈಫಲ್ 3.8 ಕೆಜಿ ಭಾರ, ಐಎನ್ ಎಸ್ ಎಸ್ ಎಸ್ 4.15 ಕೆಜಿ ಭಾರ ಹೊಂದಿದೆ.