DAKSHINA KANNADA
ದುಬೈ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ಸ್ಥಗಿತ: ಅಧಿಕಾರಿಗಳ ಜೊತೆ ಪ್ರಯಾಣಿಕ ವಾಗ್ವಾದ
ಮಂಗಳೂರು, ಜುಲೈ 11: ಮಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಿಂದ ದುಬೈಗೆ ಹೊರಡಬೇಕಾಗಿದ್ದ ವಿಮಾನ ಹೊರಡದಿರುವ ಬಗ್ಗೆ ಪ್ರಯಾಣಿಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ 11.15 ಕ್ಕೆ ಮಂಗಳೂರು ಏರ್ಪೋರ್ಟ್ ನಿಂದ ತೆರಳಬೇಕಿದ್ದ ವಿಮಾನ, ತಾಂತ್ರಿಕ ತೊಂದರೆ ಹಿನ್ನೆಲೆ ತಿರುವನಂತಪುರಕ್ಕೆ ವಿಮಾನ ತೆರಳಿದ್ದು, ನಿನ್ನೆ ರಾತ್ರಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ 130ಕ್ಕೂ ಹೆಚ್ಚು ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ. ತಿರುವನಂತಪುರಂ ಏರ್ ಇಂಡಿಯಾ ಬೇಸ್ ನಿಂದ ಬೆಳಗ್ಗೆ 9 ಗಂಟೆಗೆ ತಾಂತ್ರಿಕ ತೊಂದರೆ ನಿವಾರಿಸಿ ಬರಬೇಕಿದ್ದ ವಿಮಾನ ಇನ್ನೂ ಬಂದಿಲ್ಲ, ಬದಲಿ ವಿಮಾನ ಕೂಡ ಮಾಡಿಲ್ಲ ಎನ್ನಲಾಗಿದೆ.
ಏರ್ಪೋರ್ಟ್ ಲಾಂಜ್ ನಲ್ಲಿ ಪ್ರಯಾಣಿಕರು ಏರ್ ಇಂಡಿಯಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ಇಂಜಿನ್ ಹಾಳಾಗಿದೆ ಎಂದು ಉತ್ತರಿಸುತ್ತಿದ್ದು, ಬದಲಿ ವ್ಯವಸ್ಥೆಯನ್ನೂ ಮಾಡದೇ ಪ್ರಯಾಣಿಕರನ್ನು ದಿಗ್ಭಂಧನದಲ್ಲಿ ಇರಿಸಿದಂತಾಗಿದೆ. ರಾತ್ರಿ ಇಡೀ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಉಳಿದುಕೊಳ್ಳುವಂತೆ ಮಾಡಿರುವುದು ಸರಿಯಲ್ಲ ಎಂದು ಹಲವು ಮಂದಿ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರಂತರವಾಗಿ ಹಲವು ಬಾರಿ ಇಂತಹ ಘಟನೆಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವುದರ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕೇಂದ್ರ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.