LATEST NEWS
ಮಂಗಳೂರು -ಕಲುಷಿತಗೊಂಡ ಉಸಿರಾಡುವ ಗಾಳಿ -ವಿಪರೀತ ಎನಿಸುವಷ್ಟು ಏರಿಕೆಯಾದ ಮಾಲಿನ್ಯಕಾರಕ ಕಣ
ಮಂಗಳೂರು ಸೆಪ್ಟೆಂಬರ್ 07: ಪಶ್ಚಿಮ ಘಟ್ಟದ ತಪ್ಪಲಲ್ಲಿ ಇದ್ದರೂ ಕರಾವಳಿಯ ಮಂಗಳೂರು ನಗರದಲ್ಲಿ ಉಸಿರಾಡಲು ಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರೀನ್ ಪೀಸ್ ಸಂಸ್ಥೆಯ ಸಂಶೋಧನೆ ಪ್ರಕಾರ ಮಂಗಳೂರಿನಲ್ಲಿ ಗಾಳಿಯ ಮಟ್ಟ ತೀವ್ರವಾಗಿ ಕುಸಿದಿದೆ.
ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಸುರಕ್ಷಿತ ಗಾಳಿಯ ಗುಣಮಟ್ಟಕ್ಕಿಂತ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಗಾಳಿಯು ಹಲವು ಪಟ್ಟು ಹೆಚ್ಚು ಕಲುಷಿತಗೊಂಡಿದೆ ಎಂದು ಗ್ರೀನ್‌ಪೀಸ್ ಹೇಳಿದೆ. ಗಾಳಿಯ ಗುಣಮಟ್ಟ ಸುಧಾರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಈ ನಗರಗಳಲ್ಲಿ ಸ್ಥಿತಿ ಬಿಗಡಾಯಿಸಿದೆ ಎಂದು ಗ್ರೀನ್‌ಪೀಸ್ ತನ್ನ ‘ಸ್ಪೇರ್ ದಿ ಏರ್–2’ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಈ ಮೂರೂ ನಗರಗಳಲ್ಲಿ ಪ್ರತಿ ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 10 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆಯೂ ವಿಪರೀತ ಎನಿಸುವಷ್ಟು ಏರಿಕೆಯಾಗಿದೆ. ಮೂರೂ ನಗರಗಳಲ್ಲಿ ನಿರ್ಮಾಣ ಚಟುವಟಿಕೆಗಳಿಂದಲೇ ಅತಿಹೆಚ್ಚು ಮಾಲಿನ್ಯ ಉಂಟಾಗುತ್ತಿದೆ.