KARNATAKA
ಕಾಂತಾರ ಒಂದು ಅದ್ಭುತ ಅನುಭವ – ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ಬೆಂಗಳೂರು ಅಕ್ಟೋಬರ್ 23: ಕಾಂತಾರ ಸಿನೆಮಾ ಇದೀಗ ಬಾಲಿವುಡ್ ಮಂದಿಯ ನಿದ್ದೆಗೆಡಿಸಿದ್ದು, ಬಾಲಿವುಡ್ ನ ಹೆಸರಾಂತ ನಟ ನಟಿಯರು ಹಾಗೂ ನಿರ್ದೇಶಕರು ಸಿನೆಮಾವನ್ನು ನೋಡಿ ಹೋಗಳುತ್ತಿದ್ದಾರೆ. ಇದೀಗ ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
‘ನಾನು ‘ಕಾಂತಾರ’ ಚಿತ್ರವನ್ನು ವೀಕ್ಷಿಸಿ ಚಿತ್ರಮಂದಿರದಿಂದ ಈಗಷ್ಟೇ ಹೊರಬಂದಿದ್ದೇನೆ. ನಾನು ನಿಮ್ಮೊಂದಿಗೆ ಒಂದು ವಿಶಿಷ್ಟ ಅನುಭವ ಅನುಭವವನ್ನು ಹಂಚಿಕೊಳ್ಳಲೇಬೇಕು.. ವಾಹ್… ಎಂತಹ ಅದ್ಭುತ ಅನುಭವ, ನೀವು ಅಂತಹ ಚಿತ್ರವನ್ನು ನೋಡಿರಲು ಸಾಧ್ಯವಿಲ್ಲ. ನಾನೂ ಕೂಡ ಅಂತಹ ಚಿತ್ರವನ್ನು ಈವರೆಗೆ ನೋಡಿರಲಿಲ್ಲ. ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್’ ಎಂದು ಬರೆದುಕೊಂಡಿದ್ದಾರೆ. ‘ರಿಷಬ್, ನಿರ್ದೇಶಕರಾಗಿ ನೀವು ಉತ್ತಮ ಕೆಲಸ ಮಾಡಿದ್ದೀರಿ. ನನಗಾದ ಅನುಭವವನ್ನು ಹಂಚಿಕೊಳ್ಳದೆ ಇರಲು ಸಾಧ್ಯವಾಗುತ್ತಿಲ್ಲ.

‘ಕಾಂತಾರ’ದಲ್ಲಿ ಜಾನಪದ ಕಲೆಯ ಬಗ್ಗೆ ಬೆಳಕು ಚೆಲ್ಲಿದೆ. ಇದು ಒಂದು ರೀತಿಯ ಕಾದಂಬರಿ ಅನುಭವ. ವಿಶೇಷವಾಗಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಇದು ರಿಷಬ್ ಶೆಟ್ಟಿ ಅವರ ‘ಮಾಸ್ಟರ್ ಪೀಸ್’. ನಾನು ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಕಾಂತಾರವೂ ಒಂದು’ ಎಂದು ಅಗ್ನಿಹೋತ್ರಿ ಹೇಳಿಕೊಂಡಿದ್ದಾರೆ. ಕಾಂತಾರ ಚಿತ್ರದ ಬಗ್ಗೆ ಒಂದೇ ಪದದಲ್ಲಿ ಹೇಳುವುದಾದರೆ ‘ಇದು ಕೇವಲ ವಾಹ್! ಅದ್ಭುತ ಅನುಭವ’ ಎಂದಷ್ಟೇ ಹೇಳಬಹುದು. ಸಾಧ್ಯವಾದಷ್ಟು ಬೇಗ ಸಿನಿಮಾ ವೀಕ್ಷಿಸಿ’ ಎಂದು ಅಗ್ನಿಹೋತ್ರಿ ಕರೆ ನೀಡಿದ್ದಾರೆ.