KARNATAKA
ಸತತ 11ನೇ ದಿನ ಮತ್ತೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ
ಬೆಂಗಳೂರು: ಸತತವಾಗಿ 11ನೇ ದಿನ ಇಂಧನ ದರ ಮತ್ತೆ ಏರಿಕೆ ಆಗಿದ್ದು, ಪೆಟ್ರೋಲ್‌ಗೆ 0.55 ಪೈಸೆ ಮತ್ತು ಡೀಸೆಲ್ 0.60 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 6 ರೂ. ಹಾಗೂ ಡೀಸೆಲ್ 6.49 ರೂ.ಗಳಷ್ಟು ಹೆಚ್ಚಳವಾಗಿದೆ.
ಸದ್ಯ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 79.79 ಮತ್ತು ಡೀಸೆಲ್ ದರ 72.07 ರೂ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 77.28 ಆಗಿದ್ದು, ಡೀಸೆಲ್ ದರ 75.79 ಆಗಿದೆ. ಕಳೆದ 11 ದಿನಗಳಲ್ಲಿ ಪ್ರತಿ ದಿನ 20 ಪೈಸೆಯಿಂದ 80 ಪೈಸೆ ವರೆಗೂ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಜನ ಕಂಗಾಲಾಗಿದ್ದಾರೆ. ಮೊದಲೆ ಕೆಲಸ ಸರಿಯಾಗಿ ಸಿಗುತ್ತಿಲ್ಲ.
ಕೆಲಸವಿದ್ದರೂ ಸಂಬಳ ಸರಿಯಾಗಿ ಬರುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಸಾರ್ವಜನಿಕ ಸಾರಿಗೆ ಸಹ ಸಮರ್ಪಕವಾಗಿಲ್ಲ ಇಂತಹ ಸಂದರ್ಭದಲ್ಲಿ ಇಂಧನ ದರ ಹೆಚ್ಚಿಸಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಜನತೆಗೆ ಇಂಧನ ಬೆಲೆ ಹೆಚ್ಚಾಗಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಈ ಕಿರಿತು ಟೀಕಿಸಿವೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಕುರಿತು ಮಂಗಳವಾರವಷ್ಟೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಜನರಿಗೆ ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸರಿಯಲ್ಲ, ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿಂಪಡೆಯಿರಿ ಎಂದಿದ್ದಾರೆ.