LATEST NEWS
‘ಮೆಟ್ರೋ ಮ್ಯಾನ್’ ಶ್ರೀಧರನ್ ಬಳಿಕ ಬಿಜೆಪಿ ಪಡೆ ಸೇರುವರೇ ಪಿ.ಟಿ. ಉಷಾ..?
ತಿರುವನಂತಪುರಂ, ಫೆಬ್ರವರಿ 23: ದೇವಭೂಮಿ ಕೇರಳದಲ್ಲಿ ಚುನಾವಣಾ ಬಿಸಿ ತೀವ್ರಗೊಳ್ಳುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ದಕ್ಷಿಣದ ಈ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಿಜೆಪಿ ಗುರಿಯಾಗಿಸಿಕೊಂಡಂತೆ ಕಂಡುಬರುತ್ತಿದೆ.
ಭಾರೀ ಸಂಖ್ಯೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಕೇರಳ ಬಿಜೆಪಿ ದೇವರ ನಾಡಿನಲ್ಲಿ ತನ್ನದೊಂದು ಕೋಟೆ ಕಟ್ಟಲು ನೋಡುತ್ತಿದೆ. ಮೆಟ್ರೋ ಮಾನವ ಇ. ಶ್ರೀಧರನ್ ಬಿಜೆಪಿ ಸೇರಿದ ಬಳಿಕ, ಕೇಸರಿ ಪಾಳಯವು ಇದೀಗ ಒಲಿಂಪಿಯನ್ ಪಿ.ಟಿ. ಉಷಾರನ್ನು ತನ್ನತ್ತ ಒಲಿಸಿಕೊಳ್ಳುವ ಯತ್ನದಲ್ಲಿದೆ.
ಕೃಷಿ ಸುಧಾರಣಾ ಕಾನೂನುಗಳ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಟ್ಟ ಪಿ.ಟಿ. ಉಷಾರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನದಲ್ಲಿದೆ. ಉಷಾರ ಇತ್ತೀಚಿನ ಟ್ವೀಟ್‌ಗಳೂ ಸಹ ಆಕೆ ಬಿಜೆಪಿ ಪಾಳೆಯದತ್ತ ವಾಲುತ್ತಿರುವಂತೆ ತೋರುತ್ತಿವೆ.
ಪರಿಸರ ಕಾರ್ಯಕರ್ತೆ ಎನ್ನಲಾಗುವ ಗ್ರೇಟಾ ಥನ್‌ಬರ್ಗ್ ಹಾಗೂ ಗಾಯಕಿ ರಿಯನ್ನಾರ ಇತ್ತೀಚಿನ ಹೇಳಿಕೆಗಳನ್ನು ಕಟುವಾಗಿ ವಿರೋಧಿಸಿದ ಮಂದಿಯಲ್ಲಿ ಒಬ್ಬರಾದ ಉಷಾ, “ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇದ್ದು, ನಮ್ಮದು ನಿಜವಾದ ಪ್ರಜಾಪ್ರಭುತ್ವವಾಗಿದೆ. ನಮ್ಮ ಆಂತರಿಕ ವಿಷಯಗಳಲ್ಲಿ ತಲೆ ಹಾಕಬೇಡಿ. ನಮ್ಮ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ನಮಗೆ ಗೊತ್ತಿದ್ದು, ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುತ್ತಿರುವ ದೇಶ ನಮ್ಮದಾಗಿದೆ ಎಂದು ಟ್ವೀಟ್ ಮಾಡಿದ್ದರು.
ಕೇರಳದಲ್ಲಿ ಬಹುತೇಕ ಎಡರಂಗ ಹಾಗೂ ಕಾಂಗ್ರೆಸ್‌ನದ್ದೇ ಪಾರುಪತ್ಯ ಎಂಬಂತಿದ್ದು, ಇದೀಗ ಕೇಸರಿ ಪಡೆ ನೆಲೆಯೂರಲು ಪ್ರಯತ್ನ ನಡೆಸುತ್ತಿದೆ. ಮತ್ತೊಂದೆಡೆ, ಅತ್ತ ಕಾಂಗ್ರೆಸ್ ಕೂಡ ಕೇರಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳದಿಂದ ಲೋಕಸಭೆಗೆ ಆಯ್ಕೆಗೊಂಡಿದ್ದಾರೆ. ಇದರೊಂದಿಗೆ ಮುಂಬರುವ ಚುನಾವಣೆಯಲ್ಲಿ ಏನಾದರೂ ಮಾಡಿ ಗೆಲುವು ಸಾಧಿಸಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂಬ ದೃಢನಿಶ್ಚಯ ಹೊಂದಿದ್ದಾರೆ.