KARNATAKA
ಚಿಕ್ಕಮಗಳೂರು : 13 ವರ್ಷಗಳ ಬಳಿಕ ಮಲೆನಾಡಿನಲ್ಲಿ ನಕ್ಸಲರ ಹೆಜ್ಜೆ ಗುರುತು, ಭಯದಲ್ಲಿ ಜನತೆ, ಕಾರ್ಯಾಚರಣೆಗಿಳಿದ ಖಾಕಿ ಪಡೆ..!
ಚಿಕ್ಕಮಗಳೂರು : 13 ವರ್ಷಗಳ ಬಳಿಕ ಮಲೆನಾಡಿನಲ್ಲಿ ಸಕ್ರೀಯ ನಕ್ಸಲರ ಹೆಜ್ಜೆ ಗುರುತುಗಳು ಮೂಡಲಾರಂಭಿಸಿದ್ದು ಜನ ಸಹಜವಾಗಿತಯೇ ಭಯಭೀತರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕಾಡಂಚಿನ ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿ ಬಂದೂಕು ತೋರಿಸಿ ಮನೆಯವರನ್ನು ಬೆದರಿಸಿ ಅಡುಗೆ ತಯಾರಿಸಲು ಹೇಳಿ ಊಟ ಮಾಡಿಕೊಂಡು ಹೋಗಿರುವ ನಕ್ಸಲರ ಸುಳಿವು ಪೊಲೀಸರಿಗೆ ಸಿಕ್ಕಿದ್ದು ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಕೊಪ್ಪ ತಾಲೂಕಿನ ಅರಣ್ಯ ಭಾಗಗಳಲ್ಲಿ ಪೊಲೀಸರು ಹಾಗೂ ಎಎನ್‍ಎಫ್ ತಂಡ ಹೈ ಅಲರ್ಟ್ ಆಗಿದ್ದು ಮುಂಡಗಾರು ಲತಾ ನೇತೃತ್ವದ ತಂಡ ಈ ಭಾಗದಲ್ಲಿ ಸಕ್ರಿಯವಾಗಿರುವ ಮಾಹಿತಿ ಪೊಲೀಸರಿಗೆ ಸ್ಪಷ್ಟಮಾಹಿತಿ ಸಿಕ್ಕಿದೆ. ಕಾಫಿ ನಾಡಾದ ಚಿಕ್ಕಮಗಳೂರಿನಲ್ಲಿ ದಶಕಗಳ ಬಳಿಕ ನಕ್ಸಲರ ಹೆಜ್ಜೆ ಗುರುತು ಮೂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಗರಿಷ್ಠ ಎಚ್ಚರಿಕೆಯಿಂದ ಇದ್ದಾರೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇ ಗೌಡ ಎಂಬವರ ಮನೆಯಲ್ಲಿ ನಕ್ಸಲರಿಗೆ ಸೇರಿದ್ದು ಎನ್ನಲಾಗಿರುವ ಮೂರು ಬಂದೂಕುಗಳು ಸಿಕ್ಕಿದ ಬಳಿಕ ಪೊಲೀಸರು ಮನೆಯವರನ್ನು ವಿಚಾರಣೆಗೊಳಪಡಿಸಿದ್ದು, ಆಗ ಮನೆಯವರು ತಮ್ಮನ್ನು ಬಂದೂಕು ತೋರಿಸಿ ಹೆದರಿಸಿರುವ ವಿಚಾರ ತಿಳಿಸಿದ್ದಾರೆ. ನಕ್ಸಲರ ಓಡಾಟದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಕಾಡಂಚಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಎಲ್ಲ ಗಡಿಗಳಲ್ಲಿ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದೆ. ನಕ್ಸಲ್ ನಿಗ್ರಹ ಪಡೆ ಅಧಿಕಾರಿಗಳು ಸುಬ್ಬೇ ಗೌಡರ ಮನೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಕೊಪ್ಪ ಡಿವೈಎಸ್‍ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಎಷ್ಟು ಜನ ಬಂದಿದ್ದರು? ಅವರ ಬಳಿ ಏನೇನಿತ್ತು? ಏನು ಮಾತಾಡಿದ್ದಾರೆ. ಅಡುಗೆ ಏನು ಮಾಡಿಕೊಟ್ಟಿದ್ದೀರಿ? ಎಷ್ಟು ಜನಕ್ಕೆ ಮಾಡಿಕೊಟ್ಟಿದ್ದೀರಿ? ಎಂದು ವಿಚಾರಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಊಟ ಮಾಡಿ ಹೋಗುವಾಗ ಪೊಲೀಸರು ಬರುತ್ತಾರೆ ಎಂದು ನಕ್ಸಲರು ಗನ್ ಬಿಟ್ಟು ಹೋಗಿದ್ದಾರೆ.
ಮುಂಡಗಾರು ಲತಾ ಮತ್ತು ಜಾನ್ ಎಂದು ಕರೆಯಲ್ಪಡುವ ಜಯಣ್ಣ ನೇತೃತ್ವದ ನಕ್ಸಲ್ ತಂಡಗಳು ಮನೆಗೆ ಭೇಟಿ ನೀಡಿರಬಹುದು ಎಂದು ಮೂಲಗಳು ಶಂಕಸಿವೆ. ಈ ಬಗ್ಗೆ ಎಎನ್‌ಎಫ್ ಸದಸ್ಯರು ಸುಬ್ಬೇಗೌಡರನ್ನು ವಿಚಾರಣೆಗೊಳಪಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತು ಸಿಐಡಿ ಎಡಿಜಿಪಿ ಪ್ರಣಬ್ ಮೊಹಾಂತಿ ಗ್ರಾಮಕ್ಕೆ ಭೇಟಿ ನೀಡಿದ್ದು, ಎಎನ್‌ಎಫ್ ಎಸ್‌ಪಿ ಜಿತೇಂದ್ರಕುಮಾರ್ ದಹಿಮಾ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತು ಚಿಕ್ಕಮಗಳೂರು ಎಸ್‌ಪಿ ಡಾ.ವಿಕ್ರಮ್ ಅಮಾತೆ ಅವರ ಮಾರ್ಗದರ್ಶನದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.