ಕಾಬೂಲ್ ಅಕ್ಟೋಬರ್ 08: ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್‍ನಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಿಂದಾ ಜಾನ್ ಮತ್ತು ಘೋರಿಯನ್ ಜಿಲ್ಲೆಗಳ 12 ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೆ ಫರಾಹ್ ಮತ್ತು ಬದ್ಗಿಸ್ ಪ್ರಾಂತ್ಯಗಳಲ್ಲಿನ ಕೆಲವು ಮನೆಗಳು ಸಹ ಭಾಗಶಃ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ಘಾನಿಸ್ತಾನದ ಅತಿ ದೊಡ್ಡ ನಗರವಾದ ಹೆರಾತ್‍ನ ವಾಯವ್ಯ ಭಾಗದ 40 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, ರಿಕ್ಟರ್ ಮಾಪನದಲ್ಲಿ ಇದು 6.3 ತೀವ್ರತೆ ದಾಖಲಾಗಿದೆ. ಇದರ ನಂತರವೂ 4.3 ಮತ್ತು 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.