LATEST NEWS
ನೀನು ಮಹಿಳೆ ಇನ್ನು ನಿನಗೆ ಕೆಲಸ ಇಲ್ಲ.. ಮನೆಗೆ ತೆರಳು: ಖ್ಯಾತ ಸುದ್ದಿ ನಿರೂಪಕಿಯ ಮೇಲೆ ತಾಲಿಬಾನ್ ನಿರ್ಬಂಧ

ಕಾಬೂಲ್: ಅಪ್ಘಾನಿಸ್ತಾನವನ್ನು ಸಂಪೂರ್ಣ ತೆಕ್ಕೆಗೆ ತೆಗದುಕೊಂಡಿರುವ ತಾಲಿಬಾನ್, ಇತ್ತಿಚೆಗೆ ಮಾಧ್ಯಮಗಳ ಮುಂದೆ ಮಹಿಳೆಯರಿಗೆ ಕೆಲಸ ನಿರ್ವಹಿಸಲು ಸ್ವಾತಂತ್ರ್ಯ ನೀಡಲಾಗುವುದು ಎಂದು ಹೇಳಿಕೆ ನೀಡಿದ ಬಳಿಕವೂ ತನ್ನ ವರಸೆ ಆರಂಭಿಸಿದ್ದು, ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯೊಂದರಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಿರೂಪಕಿಯ ಮೇಲೆ ತಾಲಿಬಾನ್ ಈಗ ನಿರ್ಬಂಧ ಹೇರಿದೆ. ಈ ಮೂಲಕ ಮತ್ತೆ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದೆ.
ನಾವು ಬದಲಾಗಿದ್ದೇವೆ. ಮಹಿಳೆಯರು ಉದ್ಯೋಗಕ್ಕೆ ತೆರಳಲು ಅನುಮತಿ ನೀಡುತ್ತೇವೆ ಎಂದಿದ್ದ ತಾಲಿಬಾನಿಗಳ ನಿಜ ರೂಪ ಈಗ ನಿಧಾನವಾಗಿ ಪ್ರಕಟವಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಮಹಿಳಾ ಪತ್ರಕರ್ತರು ಕೆಲಸಕ್ಕೆ ಬರದಂತೆ ತಾಲಿಬಾನ್ ಸೂಚಿಸಿದೆ ಎಂದು RTA Pashto ನಿರೂಪಕಿ ಶಬ್ನಮ್ ದವ್ರನ್ ಹೇಳಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು ಈಗ ಅಲ್ಲಿ ತನಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಶಬನಮ್ ಅವರು ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ‘ಆರ್‌ಟಿಎ ಪಾಷ್ತೊ’ ಎಂಬ ಸುದ್ದಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ‘ವ್ಯವಸ್ಥೆ ಬದಲಾದ ನಂತರವೂ ಕೆಲಸ ಮಾಡಲು ನಾನು ಕಚೇರಿಗೆ ತೆರಳಿದೆ. ನನ್ನ ಕಚೇರಿಯ ಕಾರ್ಡ್ ತೋರಿಸಿದರೂ ಒಳಹೋಗಲು ನನಗೆ ಅವಕಾಶವನ್ನೇ ನೀಡಲಿಲ್ಲ’ ಎಂದು ಶಬನಮ್ ತಿಳಿಸಿದ್ದಾರೆ.
‘ನೀನು ಮಹಿಳೆ, ಮನೆಗೆ ತೆರಳು’ ಎಂಬುದಾಗಿ ತಾಲಿಬಾನ್ ಅಧಿಕಾರಿಗಳು ಹೇಳಿದರು ಎಂದು ಶಬನಮ್ ಆರೋಪಿಸಿದ್ದಾರೆ. ‘ನಮ್ಮ ಜೀವಕ್ಕೆ ಅಪಾಯವಿದೆ. ನನ್ನ ಮಾತುಗಳನ್ನು ಕೇಳುತ್ತಿರುವವರು ನಮಗೆ ಸಹಾಯ ಮಾಡಿ’ ಎಂದು ಸುದ್ದಿ ನಿರೂಪಕಿ ವಿಡಿಯೊದಲ್ಲಿ ಅಂಗಲಾಚಿದ್ದಾರೆ.