LATEST NEWS
AI ಮೂಲಕ ಹಿಂದೂ ದೇವತೆಗಳ ಅಪಮಾನ – Fact Vid ಫೇಸ್ಬುಕ್ ಪೇಜ್ ವಿರುದ್ದ ದೂರು
ಮಂಗಳೂರು ಸೆಪ್ಟೆಂಬರ್ 11: ಆರ್ಟಿಪಿಷಿಯಲ್ ಇಂಟಿಲಿಜೆನ್ಸ್ ಮೂಲಕ ಹಿಂದೂ ದೇವರ ಪೋಟೋಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಅದನ್ನು ಸಾಮಾಜಿಕ ಜಾಲತಾಣ ಫೆಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ Fact Vid ಫೇಸ್ಬುಕ್ ಪೇಜ್ ವಿರುದ್ದ ಹಿಂದೂ ಜನಜಾಗೃತಿ ಸಮಿತಿ ಮತ್ತು ಧರ್ಮಾಭಿಮಾನಿ ನ್ಯಾಯವಾದಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘Fact Vid’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ AI (Artificial Intelligence) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈ Al ಆಧಾರಿತ ಚಿತ್ರಗಳಿಂದ ಕೋಟ್ಯಂತರ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಸಂಬಂಧಿತ ಸೈಬರ್ ಕ್ರೈಮ್ ವಿಭಾಗವು ಇದರ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಪೇಜ್ ನ ಅಡ್ಮಿನ್ ಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ವಿಜಯ ಕುಮಾರ ಇವರು ಆಗ್ರಹಿಸಿದ್ದಾರೆ.
ಈ ಕುರಿತು 10 ಸೆಪ್ಟೆಂಬರ್ 2024 ಮಂಗಳವಾರದಂದು ಮಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ಸಮಿತಿಯ ಸಮನ್ವಯಕರು ಮತ್ತು ಧರ್ಮಪ್ರೇಮಿ ನ್ಯಾಯವಾದಿಗಳ ಒಕ್ಕೂಟವು ಸೇರಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ ಎಂದು ತಮ್ಮ ಬಗ್ಗೆ ಬರೆದುಕೊಂಡ ‘Fact Vid’ ಫೇಸ್ಬುಕ್ ಪೇಜ್ ನಲ್ಲಿ ಪ್ರತಿದಿನ 7 ರಿಂದ 8 ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳು ಪ್ರಸಾರವಾಗುತ್ತಿದ್ದು, ಇದರಲ್ಲಿ ಹಿಂದೂ ಧರ್ಮದ ಶ್ರದ್ಧಾಸ್ಥಾನ ಭಗವಾನ್ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ದೇವತೆಗಳು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ, ಓಡಿಸುತ್ತಿರುವಂತೆ, ಕುಸ್ತಿ ಆಡುತ್ತಿರುವಂತೆ ಹೀಗೆ ವಿವಿಧ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಪೋಸ್ಟ್ ಗಳಿಗೆ ಅನೇಕ ಮತಾಂಧರು ಧಾರ್ಮಿಕ ಭಾವನೆಗಳನ್ನು ನೋಯಿಸುವಂತೆ ಕಮೆಂಟ್ ಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೂಗಳನ್ನು ಕೆರಳಿಸುವ ಬಹುದೊಡ್ಡ ಷಡ್ಯಂತ್ರ ಇದರಲ್ಲಿ ಅಡಗಿದೆ.
ಈ ದೂರಿನಲ್ಲಿ ನ್ಯಾಯವಾದಿ ತೀರ್ಥೇಶ್ ಇವರು, ಫೇಸ್ಬುಕ್ ಪೇಜ್ ‘Fact Vid’ ನನ್ನು ನಿಯಂತ್ರಿಸುತ್ತಿರುವ ಅಡ್ಮಿನ್ ಮತ್ತು ಸದ್ರಿ ಪೇಜ್ ನಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡುವ ಕಮೆಂಟ್ ಗಳನ್ನೂ ಹಾಕುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 299, 192, 353 ಮತ್ತು 67 IT Act ಸೆಕ್ಷನ್ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಧಾರ್ಮಿಕ ಭಾವನೆಗೆ ನೋವುಂಟು ಮಾಡಲು ಎಡೆಮಾಡಿಕೊಡುವ AI Tool ಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.