LATEST NEWS
ಕೊರೊನಾ ಸೊಂಕಿತರ ಮನವೊಲಿಸಿ ಕೋವಿಡ್ ಸೆಂಟರ್ ಗೆ ದಾಖಲಿಸಿ – ಸಿಎಂ ಬಸವರಾಜ್ ಬೊಮ್ಮಾಯಿ
ಮಂಗಳೂರು ಅಗಸ್ಟ್ 12: ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡಲು ಸೊಂಕಿತರ ಹೋಂ ಐಸೋಲೇಶನ್ ನಲ್ಲಿಡುವ ಬದಲು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲು ಮಾಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ದಕ್ಷಿಣಕನ್ನಡ ಪ್ರವಾಸದಲ್ಲಿರುವ ಅವರು ಇಂದು ಮಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಸಭೆ ನಡೆಸಿದರು.
ಈ ಸಂದರ್ಭ ದಕ್ಷಿಣಕನ್ನಡ ಜಿಲ್ಲೆಯ ಪಾಸಿಟಿವ್ ರೋಗಿಗಳನ್ನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸದ್ದಕ್ಕೆ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದ್ದು, ಜಿಲ್ಲೆಯ 80% ಸೋಂಕಿತರು ಮನೆಗಳಲ್ಲೇ ಇರುವ ಬಗ್ಗೆ ಡಿಸಿ ರಾಜೇಂದ್ರ ಅವರನ್ನು ಪ್ರಶ್ನಿಸಿದರು. ಕಳೆದ ಬಾರಿಯೂ ನಿಮ್ಮಲ್ಲಿ ಸೋಂಕಿತರು ಮನೆಯಲ್ಲೇ ಇದ್ದರು, ಆದಷ್ಟು ಸೋಂಕಿತರನ್ನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಆರೋಗ್ಯ ಸಚಿವ ಸೂಚನೆ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ಕೇರ್ ಸೆಂಟರ್ ಗೆ ಬನ್ನಿ ಅಂದ್ರೆ ಜನ ಬರಲ್ಲ, ಮೊದಲು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವ್ಯವಸ್ಥೆ ಹೆಚ್ಚಿಸಿ, ಆಕ್ಸಿಜನ್, ವೆಂಟಿಲೇಟರ್ ಸೇರಿ ಎಲ್ಲಾ ಸೌಕರ್ಯ ಮಾಡಿ ಕೊಡಿ, ಆ ಬಳಿಕ ಸೋಂಕಿತ ವ್ಯಕ್ತಿಯ ಮನೆಯ ಸುತ್ತ ಟೆಸ್ಟಿಂಗ್ ಹೆಚ್ಚಿಸಿ, ಆ ಬಳಿಕ ವೈದ್ಯರ ತಂಡ ನೇಮಿಸಿ ಸೋಂಕಿತನ ರೋಗಲಕ್ಷಣ ಗಮನಿಸಿ ಮನವೊಲಿಸಿ ಆದಷ್ಟು ಸೋಂಕಿತರನ್ನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಎಂದರು.
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್ ಪಾಸಿಟಿವ್ ಆದ್ರೆ ಕೋವಿಡ್ ಕೇರ್ ಸೆಂಟರ್ ಸೇರಿಸಿ ಅಂತೀರಾ, ಆದ್ರೆ ಇದು ಪ್ರಾಕ್ಟಿಕಲ್ ಆಗಿ ಮಾಡಲು ಅಸಾಧ್ಯವಾದ ಕೆಲಸ, ಈಗ ಹೋಮ್ ಐಸೋಲೇಶನ್ ಕಾರಣಕ್ಕೆ ಜನರು ಕೋವಿಡ್ ಟೆಸ್ಟ್ ಮಾಡಿಸ್ತಾರೆ. ಆದ್ರೆ ನೀವು ಪಾಸಿಟಿವ್ ಬಂದ್ರೆ ಕೋವಿಡ್ ಕೇರ್ ಸೆಂಟರ್ ಸೇರಿಸ್ತೀನಿ ಅಂದ್ರೆ ಜನ ಟೆಸ್ಟ್ ಗೂ ಬರಲ್ಲ, ನಾವು ಅವರನ್ನು ಕರೆದು ಟೆಸ್ಟ್ ಮಾಡಿಸಿ ಜೈಲಿಗೆ ಹಾಕಿದ ಹಾಗೆ ಆಗುತ್ತೆ, ಅದಕ್ಕೆ ಭಯದಿಂದ ಬರಲ್ಲ, ಇಂಥ ಆದೇಶ ಮಾಡುವ ಮುನ್ನ ಸಾಧ್ಯತೆಗಳ ಬಗ್ಗೆ ಚರ್ಚಿಸೋಣ ಎಂದರು.
ಖಾದರ್ ಮಾತಿನ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ ,ಎಲ್ಲವನ್ನೂ ನಾವು ನೆಗೆಟಿವ್ ಯೋಚಿಸಿದ್ರೆ ಸಮಸ್ಯೆ ಬಗೆ ಹರಿಯಲ್ಲ. ಲಾಕ್ ಡೌನ್ ಪರಿಸ್ಥಿತಿ ಬರಬಾರದು ಅಂತ ನಾವು ಈ ಕೆಲಸ ಮಾಡ್ತಾ ಇದೀವಿ. ಪಾಸಿಟಿವ್ ಬಂದವರ ಜೊತೆ ಲಾಕ್ ಡೌನ್ ಆದ್ರೆ ಸಾಮಾನ್ಯರಿಗೂ ಕಷ್ಟ ಬರುತ್ತೆ. ಹೀಗಾಗಿ ಸೋಂಕು ತಗುಲಿದಾಗಲೇ ಕಟ್ಟುನಿಟ್ಟು ಮಾಡೋದು ಸೂಕ್ತ ಎಂದರು,