FILM
ನಟ ಉಪೇಂದ್ರಗೆ ಬಿಗ್ ರಿಲೀಫ್ – ಎಫ್ಐಆರ್ ಗಳಿಗೆ ತಡೆ ನೀಡಿದ ಹೈಕೋರ್ಟ್
ಬೆಂಗಳೂರು ಅಗಸ್ಟ್ 14: ಸಾಮಾಜಿಕ ಜಾಲತಾಣದ ಲೈವ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯವರಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಗಳಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡುವಾಗ ದಲಿತ ಸಮುದಾಯವನ್ನು ಹೀಗಳೆಯುವ ನುಡಿಗಟ್ಟೊಂದನ್ನು ಬಳಸಿದ್ದರು. ಈ ಹಿನ್ನಲೆ ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪೊಲೀಸ್ ಠಾಣೆಯಲ್ಲಿ ನಟ ಉಪೇಂದ್ರ ವಿರುದ್ದ ಪ್ರಕರಣ ದಾಖಲಿಸಿದ್ದರು. ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್ 3(1)(ಆರ್)(ಎಸ್) ಅಡಿ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಉಪೇಂದ್ರ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ನೇತೃತ್ವದ ಪೀಠವು ಈ ಆದೇಶ ಮಾಡಿದೆ.
ಉಪೇಂದ್ರ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಹಾಯಕ ಪೊಲೀಸ್ ಆಯುಕ್ತರು ನೀಡಿದ್ದ ನೋಟಿಸ್‌ಗೆ ಮಧ್ಯಂತರ ತಡೆ ವಿಧಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿದೆ. ಕನ್ನಡ ನುಡಿಗಟ್ಟು ಬಳಕೆ ಮಾಡಿದ್ದಕ್ಕೆ ತಮ್ಮ ವಿರುದ್ಧ ಸುಳ್ಳು, ಕ್ಷುಲ್ಲಕ ಮತ್ತು ಪ್ರಚಾರದ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ತಾನು ದಲಿತರು ಅಥವಾ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಅವಮಾನಿಸಿಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಈ ನಿಟ್ಟಿನಿಂದ ಪ್ರಕರಣದ ಮುಂದಿನ ಪ್ರಕ್ರಿಯೆಗೆ ತಡೆ ವಿಧಿಸಬೇಕು ಎಂದು ಮಧ್ಯಂತರ ಕೋರಿಕೆ ಸಲ್ಲಿಸಿದ್ದರು.