ಹೈದರಾಬಾದ್, ಏಪ್ರಿಲ್ 24 : ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇರಳದ ಸಾಹಿತ್ಯ ಸಮ್ಮೇಳನದಲ್ಲಿ ಹಿಂದೂ ದೇವತೆಗಳು ಹಾಗೂ ರಾಮಾಯಣದ ಬಗ್ಗೆ ಪ್ರಕಾಶ್ ರಾಜ್ ನೀಡಿದ್ದ ಹೇಳಿಕೆ ಈಗ ಕಿಚ್ಚು ಹಚ್ಚಿದ್ದು, ತೆಲಂಗಾಣದ ಬಿಜೆಪಿ ನಾಯಕನೊಬ್ಬ ನಟನ ವಿರುದ್ಧ ಅತ್ಯಂತ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ರಂಗಾರೆಡ್ಡಿ ಅರ್ಬನ್ ಜಿಲ್ಲೆಯ ಬಿಜೆಪಿ ಅಧ್ಯಕ್ಷ ವಾನಿಪಲ್ಲಿ ಶ್ರೀನಿವಾಸ್ ರೆಡ್ಡಿ, “ಪ್ರಕಾಶ್ ರಾಜ್ ಅವರನ್ನು ಯಾರಾದರೂ ಹತ್ಯೆ ಮಾಡಿದರೆ ಅವರಿಗೆ ನಾವು ಪೂರ್ಣ ಬೆಂಬಲ ನೀಡುತ್ತೇವೆ” ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಬುಧವಾರ ಕರ್ಮನ್ಘಾಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪ್ರಕಾಶ್ ರಾಜ್ ಹಿಂದೂ ಧರ್ಮ ಹಾಗೂ ದೇವತೆಗಳನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿರುವ ಶ್ರೀನಿವಾಸ್ ರೆಡ್ಡಿ, ತೆಲುಗು ಚಿತ್ರರಂಗ ಅವರಿಗೆ ಕೆಲಸ ನೀಡಬಾರದು. ಪ್ರಕಾಶ್ ರಾಜ್ ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ. “ಶ್ರೀರಾಮ ಮತ್ತು ಕೃಷ್ಣನನ್ನು ಕಾಮಿಡಿ ಪಾತ್ರಗಳಂತೆ ಚಿತ್ರಿಸುವ ಕಾಲ ಈಗ ಮುಗಿದಿದೆ. ಇದು ಹೊಸ ಭಾರತ, ಸುಮ್ಮನೆ ಕೂರುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.
ನಟನ ವಿರುದ್ಧ ವೈಯಕ್ತಿಕ ದಾಳಿ ನಡೆಸಿರುವ ರೆಡ್ಡಿ, “ಪ್ರಕಾಶ್ ರಾಜ್ ತನ್ನನ್ನು ತಾನು ನಾಸ್ತಿಕ ಎಂದು ಕರೆದುಕೊಳ್ಳುತ್ತಾರೆ. ಆದರೆ ಅವರ ತಾಯಿಯ ನಿಧನದ ನಂತರ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ನಾಸ್ತಿಕ ಎಂಬ ಮುಖವಾಡ ಹಾಕಿಕೊಂಡು ಸನಾತನ ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ರಾಜ್, ರಾಮಾಯಣವನ್ನು ಇರುವೆಗಳ ಪಾತ್ರದ ಮೂಲಕ ವಿಡಂಬನೆ (Satire) ಮಾಡಿದ್ದರು. “ಉತ್ತರ ಭಾರತದ ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸದ ಸಮಯದಲ್ಲಿ ದಕ್ಷಿಣದ ರಾವಣನ ತೋಟಕ್ಕೆ ಬರುತ್ತಾರೆ. ಅಲ್ಲಿನ ಹಣ್ಣುಗಳನ್ನು ತಿಂದಾಗ ರಾವಣ ಅವುಗಳಿಗೆ ಜಿಎಸ್ಟಿ ಸೇರಿ 2,000 ಡಾಲರ್ ಬಿಲ್ ಕೇಳುತ್ತಾನೆ. ರಾವಣ ತಾನು ದಕ್ಷಿಣದವನು ಎಂದು ಪರಿಚಯಿಸಿಕೊಳ್ಳುತ್ತಾನೆ” ಎಂಬರ್ಥದ ಕಥೆಯನ್ನು ಹೇಳಿದ್ದರು.
ಪ್ರಕಾಶ್ ರಾಜ್ ಅವರ ಈ ವಿಡಂಬನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಕೆರಳಿದ್ದು, ತಿರುಮಲ ತಿರುಪತಿ ದೇವಸ್ಥಾನದ (TTD) ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ ನಟನಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಇತ್ತ ನಟಿ ಕರಾಟೆ ಕಲ್ಯಾಣಿ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ.ಈಗ ಬಿಜೆಪಿ ನಾಯಕನ ‘ಹತ್ಯೆ ಬೆಂಬಲ’ದ ಹೇಳಿಕೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದು, ವಿವಾದ ಹೊಸ ತಿರುವು ಪಡೆದಿದೆ.