Connect with us

UDUPI

ಅರಣ್ಯ ಇಲಾಖೆ ಸಬಲೀಕರಣಕ್ಕೆ ಸರ್ವಕ್ರಮ- ರಮಾನಾಥ ರೈ

ಅರಣ್ಯ ಇಲಾಖೆ ಸಬಲೀಕರಣಕ್ಕೆ ಸರ್ವಕ್ರಮ- ರಮಾನಾಥ ರೈ

ಉಡುಪಿ ಫೆಬ್ರವರಿ 24 :ಸರ್ಕಾರದ ಇಲಾಖೆಗಳಲ್ಲಿ ಅರಣ್ಯ ಇಲಾಖೆ ಸಂರಕ್ಷಣಾ ಹೊಣೆ ಹೊತ್ತ ಇಲಾಖೆ. ಇಲಾಖೆ ವನ, ವನ್ಯಜೀವಿಗಳನ್ನು ಸಂರಕ್ಷಣೆಯಲ್ಲಿ ತೊಡಗಿರುವುದರಿಂದ ಜನ ಸಾಮಾನ್ಯರಿಂದ ಇಲಾಖೆಯ ಬಗ್ಗೆ ಆಕ್ಷೇಪಗಳೇ ಜಾಸ್ತಿ; ಆದರೆ ಅರಣ್ಯ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖೆಯನ್ನು ಜನಸ್ನೇಹಿಯಾಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಹೇಳಿದರು.

ಅವರಿಂದು ಅರಣ್ಯ ಇಲಾಖೆ ಆಯೋಜಿಸಿದ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಇಲಾಖೆ ಕರ್ತವ್ಯ ನಿರ್ವಹಿಸುತ್ತಿದ್ದು, ಸಂರಕ್ಷಣೆಯ ವೇಳೆ ಒಟ್ಟು 42 ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲ ಕೋನಗಳಿಂದ ಅರಣ್ಯ ಇಲಾಖೆಯ ಕರ್ತವ್ಯವವನ್ನು ಪರಿಶೀಲಿಸಿದಾಗ ರಾಜ್ಯ ಸಾಧನೆಯಲ್ಲಿ ಮುಂದಿದೆ.

ಮಾನವ ಪ್ರಾಣಿ ಸಂಘರ್ಷಕ್ಕೆ ಇತಿಹಾಸವೇ ಇದ್ದು, ಪ್ರಸಕ್ತ ಸಾಲಿನಲ್ಲಿ ಈ ಸಂಬಂಧ ಅವಘಡಗಳಿಗೆ ಪರಿಹಾರದ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದೆ. ಆರ್ ಎಫ್ ಒ ಗಳಿಗೆ ಧಾರವಾಡದಲ್ಲಿ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಹುತಾತ್ಮರ ದಿನದಂದು ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ಮುಖ್ಯಮಂತ್ರಿ ಪದಕ ನೀಡಲು ನಿರ್ಧರಿಸಲಾಗಿದೆ. ಸಿಬ್ಬಂದಿಗಳಿಗೆ ವಿಶೇಷ ಭತ್ಯೆ, ಪ್ರೇರಕರಿಗೆ ಭತ್ಯೆ, ದಿನಗೂಲಿ ನೌಕರರನ್ನು ಖಾಯಮಾತಿಗಾಗಿ ಕ್ರಮಕೈಗೊಳ್ಳಲಾಗಿದೆ.

ಹುಲಿಯೋಜನೆಯನ್ನು ಅನುಷ್ಠಾನಕ್ಕೆ ತಾರದೆ, ಡೀಮ್ಡ್ ಫಾರೆಸ್ಟ್‍ಗೆ ಸಂಬಂಧಿಸಿ ಜನಪರ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಲಾಗುವುದು ಎಂದ ಸಚಿವರು, ಅರಣ್ಯ ಇಲಾಖೆ ಪ್ರಸಕ್ತ ಸಾಲಿನಲ್ಲಿ ‘ನೀರಿಗಾಗಿ ಅರಣ್ಯ’ ಘೋಷವಾಕ್ಯದಡಿ ಅರಣ್ಯದ ನಡುವಿನ ಜಲಮೂಲಗಳ ಸಂರಕ್ಷಣೆಗೆ ಒತ್ತುನೀಡಿದೆ. ಅರಣ್ಯವಿಲ್ಲದೆ ಜಲಮೂಲವಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟುಮಾಡಲು, ಪರಿಸರ ಪ್ರೇಮಿಗಳನ್ನಾಗಿಸಲು ಚಿಣ್ಣರ ವನ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿದೆ. ಕಾಡನ್ನು ರಕ್ಷಿಸಿದರೆ ಪ್ರಾಣಿಗಳು, ವನ್ಯ ಜೀವಿಗಳಿಂದ ಕಾಡು, ಜಲಮೂಲಗಳು ಸುರಕ್ಷಿತ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಇದನ್ನು ಅನುಷ್ಠಾನಕ್ಕೆ ತರಲು ಎಲ್ಲರ ಸಹಕಾರ ಅಗತ್ಯ ಎಂದು ಸಚಿವರು ಹೇಳಿದರು.

ವೃಕ್ಷ ಉದ್ಯಾನವನಕ್ಕಾಗಿ ದುಡಿದ ಅರಣ್ಯ ಇಲಾಖೆಯವರಿಗೆ ಸನ್ಮಾನ, ಗೌರವಗಳನ್ನು ನೀಡಲಾಯಿತು. ಯಶಸ್ವಿ ಫಿಶ್‍ಮೀಲ್‍ನವರಿಗೆ ಉದ್ಯಾವರ ಬಡಗಬೆಟ್ಟುವಿನಲ್ಲಿ ಸುಮಾರು 500 ಸಸಿಗಳನ್ನು ನೆಟ್ಟು ನೀರುಹಾಕಿ ಪೋಷಿಸುತ್ತಿರುವುದಕ್ಕೆ ಸನ್ಮಾನಿಸಲಾಯಿತು. ಮರಗಳ ಸಂರಕ್ಷಣೆಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಅರಣ್ಯ ಇಲಾಖೆ ಸಚಿವರ ನೇತೃತ್ವದಲ್ಲಿ ಜನಸ್ನೇಹಿಯಾಗಿ ಬದಲಾಗುತ್ತಿದೆ. ಪರಿಸರ ಸೂಕ್ಷ್ಮ ಜಿಲ್ಲೆಯಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಅಂತರ್ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಕೆರೆಗಳ ಅಭಿವೃದ್ಧಿ, ಜಲಸಂಪತ್ತು ಅಭಿವೃದ್ಧಿ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ.

80 ಬಡಗಬೆಟ್ಟುವನ್ನು ವೃಕ್ಷೋದ್ಯಾನ ಮಾಡುವ ಪ್ರಸ್ತಾಪ ತಾವು ಸಚಿವರಾಗಿದ್ದಾಗ ಸಲ್ಲಿಸಿದ್ದು, ಇಂದು ಉದ್ಘಾಟನೆಯಾಗಿರುವುದು ಜೀವನದ ಸ್ಮರಣೀಯ ಕ್ಷಣ ಎಂದ ಅವರು, ತಾವು ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ನಗರೋತ್ಥಾನ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ ಕುಡಿಯುವ ನೀರಿನ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಿದ್ದು, ಇದರಿಂದಾಗಿ ಮಂಗಳೂರಿಗೆ ಇನ್ನು 15 ವರ್ಷ ನೀರಿನ ತೊಂದರೆ ಇರುವುದಿಲ್ಲ; ಇದೇ ಮಾದರಿಯಲ್ಲಿ ಅರಣ್ಯ ಸಚಿವರು ತಮ್ಮೆಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದು, ಕೆಲವು ತಾಂತ್ರಿಕ ಕಾರಣಗಳಿಂದಾಗಿ 80 ಬಡಗಬೆಟ್ಟು ಮತ್ತು ಅಲೆವೂರಿನ ಕೆಲವು ಮನೆಯವರಿಗೆ ಹಕ್ಕುಪತ್ರ ಲಭ್ಯವಾಗಿಲ್ಲ; ಈ ಕಾರಣದಿಂದಲೆ ಅವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅರಣ್ಯ ಸಚಿವರ ಗಮನಸೆಳೆದರು.

ಡೀಮ್ಡ್ ಫಾರೆಸ್ಟ್, ಹಕ್ಕುಪತ್ರ ವಿತರಣೆ, ಬಫರ್ ಫಾರೆಸ್ಟ್ ಝೋನ್ ಬಗ್ಗೆ ಜನರ ಅನುಮಾನಗಳನ್ನು ಜನಸಂಪರ್ಕ ಸಭೆಗಳಲ್ಲಿ ಪರಿಹರಿಸುವ ಯತ್ನವನ್ನು ಮಾಡಲಾಗಿದೆ. ವೃಕ್ಷೋದ್ಯಾನದ ನಿರ್ವಹಣೆಯ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *