DAKSHINA KANNADA
ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು: ಎಸ್ಪಿ ವಿಕ್ರಮ್ ಅಮಟೆ
ಪುತ್ತೂರು, ಮೇ 18:ಬಿಜೆಪಿ ಮುಖಂಡರ ಅವಹೇಳನಕಾರಿ ಬ್ಯಾನರ್ ಅಳವಡಿಕೆ ಪ್ರಕರಣಕ್ಕೆ ಸಂಭಂದಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಪ್ರದೇಶವನ್ನು ಕುರೂಪಗೊಳಿಸಿದ ಸೆಕ್ಷನ್ ನಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ 9 ಜನರನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಲೀಸ್ ವಶದಲ್ಲಿದ್ದವರ ಮೇಲೆ ಪೋಲೀಸ್ ದೌರ್ಜನ್ಯ ನಡೆದಿದೆ ಎನ್ನುವ ಮಾಹಿತಿ ಹರಿದಾಡಿದೆ. ಈ ಸಂಬಂಧ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ದೌರ್ಜನ್ಯಕ್ಕೊಳಗಾದ ಅವಿನಾಶ್ ನೀಡಿದ ದೂರಿನ್ವಯ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ
ಪುತ್ತೂರು ಡಿವೈಎಸ್ಪಿ , ಪುತ್ತೂರು ಗ್ರಾಮಾಂತರ ಠಾಣೆ ಎಸೈ ಮತ್ತು ಪುತ್ತೂರು ನಗರ ಪೋಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಹಿನ್ನಲೆಯಲ್ಲಿ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಇಲಾಖಾ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೋಲೀಸ್ ವಿರುದ್ಧ ಅಮಾನತು ಅಥವಾ ಇಲಾಖಾ ಕ್ರಮ ಸಾಧ್ಯತೆ ಇದೆ ಎಂದು ಎಸ್ಪಿ ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ.