Connect with us

LATEST NEWS

ಗರ್ಭಿಣಿಯರ ಚಿಕಿತ್ಸೆ ನೀಡದೇ ಅಲೆದಾಡಿಸಿದರೆ ನಿರ್ದಾಕ್ಷಿಣ್ಯ ಕ್ರಮ –ಸಚಿವ ಕೋಟ ಎಚ್ಚರಿಕೆ

ಮಂಗಳೂರು ಜುಲೈ 20 : ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಕೋವಿಡ್ ಸೋಂಕಿತರೆಂಬ ಕಾರಣಕ್ಕೆ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸುವಂತಿಲ್ಲ. ಹೆರಿಗೆ ವಿಚಾರದಲ್ಲಿ ಖಾಸಗೀ ಆಸ್ಪತ್ರೆಗಳು ಸತಾಯಿಸದೆ ಹೆರಿಗೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಅವರು ಸೋಮವಾರ ವೆನ್‍ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು. ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸತಾಯಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವ್ಯವಸ್ಥಿತವಾಗಿ ಹೆರಿಗೆ ಮಾಡಿಸಲು ಆಯಾ ಆಸ್ಪತ್ರೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಇದರಲ್ಲಿ ವಿಳಂಬ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನೆಲ್ಯಾಡಿ ಗರ್ಭಿಣಿ ಅಲೆದಾಟ: ತನಿಖೆಗೆ ಡಿಸಿಗೆ ಆದೇಶ

ನೆಲ್ಯಾಡಿಯ ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿ ದಿನಪೂರ್ತಿ ಅಲೆದಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೂಡಲೇ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಸಕಾಲಕ್ಕೆ ಮಹಿಳೆಗೆ ಚಿಕಿತ್ಸೆ ನೀಡಲು ವಿಳಂಬಿಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಅಗತ್ಯ ಬಿದ್ದರೆ ಅಂತಹವರನ್ನು ಸೇವೆಯಿಂದ ಅಮಾನತು ಮಾಡಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ನೆಲ್ಯಾಡಿಯ ಮಹಿಳೆಗೆ ಕೂಡಲೇ ಅಗತ್ಯ ಚಿಕಿತ್ಸೆ ನೀಡಲು ಸಚಿವರು ಆದೇಶಿಸಿದರು.


ಲೇಡಿಗೋಷನ್ ಆಸ್ಪತ್ರೆಯಲ್ಲಿ ಕೋವಿಡ್ ಶಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡುಗಳ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ಇದರಿಂದ ಅಂತಹ ರೋಗಿಗಳಿಗೆ ಲೇಡಿಘೋಷನ್‍ನಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ ಎಂದು ಸಚಿವರು ಹೇಳಿದರು.
ವೆನ್‍ಲಾಕ್‍ನಲ್ಲಿ ವೈದ್ಯರು ಪರಸ್ಪರ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ರೋಗಿಗಳಿಗೆ ಸಕಾಲಕ್ಕೆ ಊಟೋಪಚಾರ ಸರಬರಾಜು ಮಾಡಬೇಕು. ಉಪಹಾರದಲ್ಲಿ ದಿನನಿತ್ಯ ಬದಲಾವಣೆ ತಂದು, ಅಗತ್ಯವಿರುವವರಿಗೆ ಹೆಚ್ಚುವರಿ ಉಪಹಾರ ಒದಗಿಸಬೇಕು ಎಂದು ಸಚಿವರು ತಿಳಿಸಿದರು. ವೆನ್‍ಲಾಕ್ ಆಸ್ಪತ್ರೆಗೆ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ನೇಮಿಸಿ, ಯಾವುದೇ ರೋಗಿಗಳು ಬಂದರೂ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸಲು ಕ್ರಮ ಕೈಗೊಳ್ಳಬೇಕು.


ವೆನ್‍ಲಾಕ್‍ನಲ್ಲಿ ಐಸಿಯು ಕೊಠಡಿಗಳ ವಿಸ್ತರಣೆ ಹಾಗೂ ಹೆಚ್ಚುವರಿ ವೆಂಟಿಲೇಟರ್‍ಗಳನ್ನು ಅಳವಡಿಸಲು ಕೂಡಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ ಸಚಿವರು, ಹೆಚ್ಚುವರಿ ಪಿಪಿಇ ಕಿಟ್, ಎನ್ 95 ಮಾಸ್ಕ್‍ಗಳನ್ನು ಬೇಡಿಕೆಯಷ್ಟು ಒದಗಿಸಲಾಗುವುದು. ಇನ್ನಷ್ಟು ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಡಿ ಗ್ರೂಪ್ ಸಿಬ್ಬಂದಿಗಳ ನೇಮಕ, ಅಂಬ್ಯುಲೆನ್ಸ್‍ಗಳ ಖರೀದಿ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರಕಾರ ಅನುಮೋದನೆ ನೀಡಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ರೋಗಲಕ್ಷಣಗಳಿಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ರಾಜ್ಯ ಸರಕಾರ ಅವಕಾಶ ನೀಡಿರುವುದರಿಂದ ಅಂತಹವರಿಗೆ ತ್ವರಿತವಾಗಿ ಅನುಮತಿ ನೀಡಲು ಸಚಿವರು ಸೂಚಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *