DAKSHINA KANNADA
ಹಲವು ವರ್ಷಗಳ ಬಸ್ ನಿಲ್ದಾಣದ ಬೇಡಿಕೆಗೆ ಮನ್ನಣೆ, ಸ್ಥಳೀಯರು ಹರ್ಷ, ವ್ಯಕ್ತಿಯೋರ್ವರಿಂದ ಬಸ್ ನಿಲ್ದಾಣಕ್ಕೆ ವಿರೋಧ..

ಪುತ್ತೂರು, ಸೆಪ್ಟೆಂಬರ್ 12: ಪುತ್ತೂರು ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕು ಎಂಬಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಮನವಿ ಆ ಭಾಗದ ಜನರು ಸಂಬಂಧಪಟ್ಟ ಅಧಿಕಾರಿಗಳು ಹಾಗು ಜನಪ್ರತಿನಿಧಿ ನೀಡಿದ್ದು, ಇದೀಗ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿದೆ.
ಬನ್ನೂರು ಗ್ರಾಮಪಂಚಾಯತ್ ದಾರಂದಕುಕ್ಕು ಜಂಕ್ಷನ್ ನಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲು ಬನ್ನೂರು ಗ್ರಾಮಪಂಚಾಯತ್ ಮುಂದಾಗಿದ್ದು, ಈ ನಿರ್ಧಾರಕ್ಕೆ ಸ್ಥಳೀಯರೊಬ್ಬರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸರಕಾರಿ ಜಾಗವಾಗಿದ್ದರೂ, ಬಸ್ ನಿಲ್ದಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ಹರಿಹಾಯ್ದ ಘಟನೆಯೂ ನಡೆದಿದೆ.

ಕಳೆದ ಹಲವು ವರ್ಷಗಳಿಂದ ಉಪ್ಪಿನಂಗಡಿ-ಪುತ್ತೂರು ರಸ್ತೆಯ ದಾರಂದಕುಕ್ಕ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಬಂದ ಹಿನ್ನಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ನಿಧಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ದಾರಂದಕುಕ್ಕು ಜಂಕ್ಷನ್ ಬಳಿಯೇ ಈ ಬಸ್ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಬೇಕಾ ಸ್ಥಳವನ್ನೂ ಖಾಯ್ದಿರಿಸಲಾಗಿದೆ.
ಈಗಾಗಲೇ ಈ ಜಾಗದ ಸರ್ವೆ ಕಾರ್ಯವೂ ಪೂರ್ಣಗೊಂಡಿದ್ದು, ಸರಕಾರ ಜಾಗ ಎನ್ನುವುದು ದೃಢಪಟ್ಟ ಬಳಿಕವೇ ಜಾಗವನ್ನು ಸಮತಟ್ಟು ಮಾಡುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಆರಂಭಿಸಿದೆ. ಆದರೆ ಬಸ್ ನಿಲ್ದಾಣ ನಿರ್ಮಿಸುತ್ತಿರುವ ಜಾಗ ತಮ್ಮದೆಂದು ಸ್ಥಳೀಯ ವ್ಯಕ್ತಿಯೋರ್ವರು ಜಾಗದ ಮರು ಸರ್ವೆಗೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಸರ್ವೇ ಕಾರ್ಯವನ್ನು ಸೆಪ್ಟೆಂಬರ್ 9 ರಂದು ನಡೆಸಲಾಯಿತು.
ಆದರೆ ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ ಜಾಗ ಸರಕಾರಕ್ಕೆ ಸೇರಿದ್ದು, ಅದೇ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದ ಘಟನೆಯೂ ಈ ಸಂದರ್ಭದಲ್ಲಿ ನಡೆಸಿದ್ದಾರೆ. ಈ ಭಾಗದಿಂದ ನೂರಾರು ವಿದ್ಯಾರ್ಥಿಗಳು ಪುತ್ತೂರು ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ಮಳೆಗಾಲದಲ್ಲಿ ಮಳೆಯಲ್ಲೇ ಬಸ್ ಗಾಗಿ ಕಾಯಬೇಕಾದ ಮತ್ತು ಬೇಸಿಗೆಯಲ್ಲಿ ಬಿಸಿಲಿಗೆ ಬೇಯಬೇಕಾದ ಪರಿಸ್ಥಿತಿಯಿದೆ. ಕೂಡಲೇ ಬಸ್ ನಿಲ್ದಾಣವನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕೆಂದು ಸ್ಥಳೀಯ ವಿದ್ಯಾರ್ಥಿಗಳು ಒತ್ತಾಯಿಸಲಾರಂಭಿಸಿದ್ದಾರೆ.
ಸಾವಿರಾರು ಜನ ಈ ಪ್ರದೇಶದಿಂದ ತಮ್ಮ ಅವಶ್ಯಕತೆಗಳಿಗಾಗಿ ಪುತ್ತೂರು ಮತ್ತು ಉಪ್ಪಿನಂಗಡಿ ಭಾಗಗಳಿಗೆ ಪ್ರತಿದಿನವೂ ಓಡಾಡುತ್ತಿದ್ದಾರೆ. ಇಷ್ಟೊಂದು ಜನ ಓಡಾಟವಿರುವ ಈ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತೆ ಸಾರ್ವಜನಿಕರು ಪಂಚಾಯತ್ ಗೂ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳೀಯ ಶಾಸಕರ ನಿಧಿಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಬಸ್ ನಿಲ್ದಾಣಕ್ಕಾಗಿ ಸರಕಾರಿ ಜಾಗವನ್ನು ಗುರುತಿಸಿ ಸರ್ವೇ ಕಾರ್ಯವನ್ನೂ ಮಾಡಲಾಗಿದೆ. ಆದರೆ ಇದೀಗ ಬಸ್ ನಿಲ್ದಾಣಕ್ಕೂ ವಿರೀಧ ವ್ಯಕ್ತಪಡಿಸುವ ಕಾರ್ಯ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಬಸ್ ನಿಲ್ದಾಣ ಕಾಮಗಾರಿಯನ್ನು ನಿಲ್ಲಿಸಲು ಬಿಡುವುದಿಲ್ಲ ಎಂದು ಸ್ಥಳೀಯರು ಪಣ ತೊಟ್ಟಿದ್ದಾರೆ.