DAKSHINA KANNADA
ಕಡಬ – ಆ್ಯಸಿಡ್ ದಾಳಿಗೂ ಮುನ್ನ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದ ಆಬಿನ್ ಸಿಬಿ

ಕಡಬ ಮಾರ್ಚ್ 06: ಪ್ರೀತಿ ನಿರಾಕರಿಸಿದ್ದಕ್ಕೆ ಪಿಯುಸಿ ವಿಧ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿ ಗಾಯಗೊಳಿಸಿದ ಆರೋಪಿ ಈ ಘಟನೆಗೆ ಮುನ್ನವೇ ಕಡಬಕ್ಕೆ ಬಂದು ಅಲ್ಲಿ ತಿರುಗಾಡಿರುವ ಬಗ್ಗೆ ಸಿಸಿಟಿವಿ ವಿಡಿಯೋಗಳು ಇದೀಗ ಲಭ್ಯವಾಗಿದೆ. ಆ್ಯಸಿಡ್ ಎರಚಿದ ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ವಾಯಿಕಡವು ಗ್ರಾಮದ ಅಡಕ್ಕರ ನಿವಾಸಿ ಅಬಿನ್ ಸಿಬಿ ಘಟನೆಗೆ ಸ್ವಲ್ಪ ಸಮಯದ ಮೊದಲು ಆಕೆಯನ್ನು ಭೇಟಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಮಾರ್ಚ್ 3ರಂದು ರಾತ್ರಿ ಕೇರಳದಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿಳಿದಿದ್ದ ಅಬಿನ್ ರೈಲು ನಿಲ್ದಾಣದಲ್ಲಿಯೇ ರಾತ್ರಿ ಕಳೆದು ಮರುದಿನ ಮುಂಜಾನೆ ಬಸ್ ಹತ್ತಿ ಕಡಬಕ್ಕೆ ತಲುಪಿದ್ದ. ಬಸ್‌ನಿಂದ ಇಳಿದ ಆತ ಪರೀಕ್ಷೆ ಬರೆಯಲು ಕಾಲೇಜಿಗೆ ಬರುತ್ತಿದ್ದ ಸಂತ್ರಸ್ತ ವಿದ್ಯಾರ್ಥಿನಿಯನ್ನು ಕಡಬ ಪೇಟೆಯಲ್ಲಿ ಭೇಟಿಯಾಗಿ ಮಾತನಾಡಿ ರುವುದು ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ತನ್ನ ಪ್ರೀತಿಯನ್ನು ನಿರಾಕರಿಸದಂತೆ ಕೇಳಿಕೊಂಡಿದ್ದ ಎನ್ನಲಾಗಿದೆ. ಕಡಬ ಬಸ್ ನಿಲ್ದಾಣದ ಬಳಿಯ ಬೇಕರಿಗೆ ಕಪ್ಪು ಅಂಗಿ,ಕಪ್ಪು ಪ್ಯಾಂಟ್ ಧರಿಸಿ ಬಂದಿದ್ದ ಆರೋಪಿ ಅಬಿನ್ ಸಿಬಿ, ಬೇಕರಿಯಲ್ಲಿ ತನ್ನ ಎರಡು ಮೊಬೈಲ್ ಫೋನ್ ಗಳನ್ನ ಚಾರ್ಜ್ ಗೆ ಇಟ್ಟಿದ್ದಾನೆ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ದಾಳಿಗೊಳಗಾದ ಪ್ರಮುಖ ಸಂತ್ರಸ್ತೆಯ ಪರಿಚಿತನಾಗಿದ್ದ ಅಬಿನ್ ಬೇಕರಿಯಿಂದ ತನ್ನ ಬ್ಯಾಗ್ ಸಮೇತ ಹೊರಟ ಆತ ಕಡಬ ಎಪಿಎಂಸಿ ಪ್ರಾಂಗಣದ ಬಳಿಯಿಂದ ಕಡಬ ಸರಕಾರಿ ಪ.ಪೂ. ಕಾಲೇಜಿಗೆ ಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ನಡೆದು ಹೋಗಿ ಅಲ್ಲಿಯೇ ರಸ್ತೆಯ ಪಕ್ಕದಲ್ಲಿ ಜನವಸತಿ ಇಲ್ಲದ ಮನೆಯೊಂದರ ಹಿಂಬದಿ ಯಾರಿಗೂ ಕಾಣದಂತೆ ಬಟ್ಟೆ ಬದಲಾಯಿಸಿ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿ ನೇರ ಕಾಲೇಜಿಗೆ ತೆರಳಿದ್ದ. ಅಲ್ಲದೆ ಸಂತ್ರಸ್ತೆ ವಿದ್ಯಾರ್ಥಿನಿಗೆ ಮಾರ್ಚ್ 1 ರಿಂದ ಪರೀಕ್ಷೆ ಇದೆ ಎನ್ನುವುದನ್ನು ತಿಳಿದುಕೊಂಡಿದ್ದ ಆರೋಪಿ, ಆ ಕಾರಣಕ್ಕಾಗಿ ಪರೀಕ್ಷೆಯ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದ ಆರೋಪಿ ಅಲ್ಲದೆ ಪರೀಕ್ಷೆ ನಡೆಯುವ ಕಡಬ ಪದವಿಪೂರ್ವ ಕಾಲೇಜಿಗೆ ಬೇರೆ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಾರೆ.
ಇದರಿಂದ ತನ್ನ ಪತ್ತೆ ಅಸಾಧ್ಯ ಎಂದು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಆರೋಪಿ ಅಬಿನ್ ಕಾಲೇಜಿನ ಸಮವಸ್ತ್ರವನ್ನು ಖರೀದಿಸಿ ಕಾಲೇಜಿನೊಳಗೆ ನುಗ್ಗಿ ಆ್ಯಸಿಡ್ ಹಾಕಿದ್ದಾನೆ. ಘಟನೆಯಲ್ಲಿ ಆರೋಪಿಯು ತಾನು ಪ್ರೀತಿಸುತ್ತಿದ್ದ ವಿದ್ಯಾರ್ಥಿನಿಯನ್ನು ಗುರಿಯಾ ಗಿರಿಸಿ ಆ್ಯಸಿಡ್ ಎರಚಿದಾಗ ಆಕೆಯ ಹತ್ತಿರದಲ್ಲಿದ್ದ ಆಕೆಯ ಇಬ್ಬರು ಸ್ನೇಹಿತೆಯರಿಗೂ ಆ್ಯಸಿಡ್ ತಗಲಿ ಗಾಯಗಳಾಗಿವೆ. ಸದ್ಯ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ಆ್ಯಸಿಡ್ ದಾಳಿಯಿಂದ ಗಂಭೀರವಾಗಿ ಗಾಯೊಗಂಡಿರುವ ವಿಧ್ಯಾರ್ಥಿನಿಯರು ಮಂಗಳೂರನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.