DAKSHINA KANNADA
ಆ್ಯಸಿಡ್ ದಾಳಿ ಪ್ರಕರಣದಲ್ಲಿ ಕರ್ತವ್ಯ ಲೋಪ ಕಡಬ ಎಸೈ ಅಮಾನತು

ಆ್ಯಸಿಡ್ ದಾಳಿ ಪ್ರಕರಣದಲ್ಲಿ ಕರ್ತವ್ಯ ಲೋಪ ಕಡಬ ಎಸೈ ಅಮಾನತು
ಮಂಗಳೂರು ಫೆಬ್ರವರಿ 8: ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಜನವರಿ 23 ರಂದು ನಾದಿನಿಯ ಮೇಲಿನ ಆ್ಯಸಿಡ್ ದಾಳಿ ಪ್ರಕರಣವನ್ನು ಕಡಬ ಪೋಲೀಸರು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ಕಡಬ ಎಸೈ ಯನ್ನು ಅಮಾನತು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಉನ್ನತ ಅಧಿಕಾರಿಗಳು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಈ ವಿಚಾರವಾಗಿ ವರದಿ ಸಲ್ಲಿಸಿದ್ದು, ವರದಿಯ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಈ ಆದೇಶ ಹೊರಡಿಸಿದ್ಡಾರೆ.

ಕೋಡಿಂಬಾಳ ನಿವಾಸಿ ವಿಧವೆ ಸ್ವಪ್ನಾ ತಮ್ಮ ಮೂವರು ಮಕ್ಕಳೊಂದಿಗೆ ಗಂಡನ ಮನೆಯಲ್ಲಿ ವಾಸವಾಗಿದ್ದು, ಆಕೆಗೆ ಆಕೆಯ ಗಂಡನ ಅಣ್ಣ ಜಯಾನಂದ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ ಜಾಗದ ವಿಷಯದಲ್ಲೂ ಸ್ವಪ್ನಾಳೊಂದಿಗೆ ವೈಮನಸ್ಸು ಹೊಂದಿದ್ದ. ಜನವರಿ 23 ರಂದು ಏಕಾಏಕಿ ಸ್ವಪ್ನಾ ಮನೆಗೆ ನುಗ್ಗಿದ ಜಯಾನಂದ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ.
ದಾಳಿಯಿಂದ ಸ್ವಪ್ನಾಳ 2 ವರ್ಷದ ಮಗುವಿಗೂ ಗಾಯಗಳಾಗಿತ್ತು. ಈ ಸಂಬಂಧ ಕಡಬ ಪೋಲೀಸರಿಗೆ ದೂರು ನೀಡಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿ ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವುದನ್ನು ಪ್ರಕರಣದ ಉನ್ನತ ತನಿಖೆ ನಡೆಸುತ್ತಿರುವ ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ಪತ್ತೆಹಚ್ಚಿದೆ.
ಈ ಸಂಬಂಧ ಕಡಬ ಠಾಣಾಧಿಕಾರಿಗಳ ವಿರುದ್ಧ ವರದಿಯನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಕೆ.ಎಂ.ಲಕ್ಷ್ಮೀ ಪ್ರಸಾದ್ ಅವರಿಗೆ ಸಲ್ಲಿಸಿದ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಜಯಾನಂದನ ಕಿರುಕುಳದ ಬಗ್ಗೆ ಸ್ವಪ್ನಾ ಹಲವು ಬಾರಿ ಕಡಬ ಪೋಲೀಸರ ಗಮನಕ್ಕೆ ತಂದಿದ್ದರೂ , ಪೋಲೀಸರು ಇದನ್ನು ಗಂಭೀರವಾಗಿ ಪರಿಗಣಿಸದ ಕಾರಣವೇ ಆ್ಯಸಿಡ್ ದಾಳಿಯಂತಹ ಪ್ರಕರಣ ನಡೆಯಿತು ಎನ್ನುವ ಅಂಶವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.