LATEST NEWS
ಗಂಭೀರ ಸ್ಥಿತಿಯಲ್ಲಿದ್ದ ಆರೋಪಿಯನ್ನು ಸ್ಟ್ರೆಚರ್ನಲ್ಲಿಯೇ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು- ಗರಂ ಆದ ನ್ಯಾಯಾಧೀಶರು
ಮಂಗಳೂರು : ಗಂಭೀರ ಸ್ಥಿತಿಯಲ್ಲಿದ್ದು ಹಾಸಿಗೆ ಹಿಡಿದಿರುವ ವ್ಯಕ್ತಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ ಪೊಲೀಸರ ನಡೆಯನ್ನು ನ್ಯಾಯಾಧೀಶರು ತರಾಟೆ ತೆಗೆದುಕೊಂಡ ಘಟನೆ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.
ಅಡ್ಡೂರು ಗ್ರಾಮದ ಮಹಮ್ಮದ್ ಎಂಬಾತನ ಮೇಲೆ ಹಲವು ವರ್ಷಗಳ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೊಂಬಿ, ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಆರೋಪಿ ಮಹಮ್ಮದ್ನನ್ನು ಕೋರ್ಟ್ಗೆ ಹಾಜರಾಗುವಂತೆ ವಾರಂಟ್ ನೀಡಲಾಗಿತ್ತು. ಆದರೆ, ಅವರು ಅಸೌಖ್ಯದಿಂದ ಹಾಸಿಗೆ ಹಿಡಿದು, ಕುಟುಂಬ ವರ್ಗದವರಿಂದ ದೂರವಾಗಿ ಮುಲ್ಕಿ ಕಾರ್ನಾಡ್‌ನ ಆಪದ್ಬಾಂಧವ ಆಸೀಫ್ ಅವರ ಅನಾಥಾಶ್ರಮ ಸೇರಿದ್ದರು.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಕೋರ್ಟ್ಗೆ ಹಾಜರಾಗುವಂತೆ ಒತ್ತಡ ಹೇರಿದ್ದರು.ಆದ್ದರಿಂದ, ಮಹಮ್ಮದ್ನನ್ನು ಆಪದ್ಬಾಂಧವ ಆಸೀಫ್ ಅವರು ಆ್ಯಂಬುಲೆನ್ಸ್‌ನಲ್ಲಿ ದ.ಕ.ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಬಂದು ಸ್ಟ್ರೆಚರ್‌ನಲ್ಲೇ ಮಲಗಿಸಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಇದನ್ನು ಕಂಡ ನ್ಯಾಯಾದೀಶರು ಆರೋಪಿ ಸ್ಥಿತಿ ಗಂಭೀರವಾಗಿದ್ದರೂ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಅಗತ್ಯವೇನಿತ್ತು? ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಅನಾಥಾಶ್ರಮಕ್ಕೆ ಕರೆದೊಯ್ಯಲಾಯಿತು.