FILM
ರಾಮ್ ಚರಣ್ ನಿರ್ಮಾಣದ ‘ದಿ ಇಂಡಿಯನ್ ಹೌಸ್’ ಸಿನಿಮಾ ಸೆಟ್ನಲ್ಲಿ ಅವಘಡ; ಹಲವರಿಗೆ ಗಾಯ

ಶಂಶಾಬಾದ್, ಜೂನ್ 12: ತೆಲುಗಿನ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ‘ದಿ ಇಂಡಿಯನ್ ಹೌಸ್’ ಸಿನಿಮಾ ಸೆಟ್ನಲ್ಲಿ ಅವಘಡ ಸಂಭವಿಸಿದೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ ಈ ಅವಘಡ ಉಂಟಾಗಿದೆ. ಈ ಚಿತ್ರದ ನಿರ್ಮಾಣದಲ್ಲಿ ರಾಮ್ ಚರಣ್ ಅವರು ಕೂಡ ಭಾಗಿ ಆಗಿದ್ದಾರೆ ಎನ್ನಲಾಗಿದೆ.
ಈ ಘಟನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಕಿಂಗ್ ಎನಿಸಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇನ್ನಷ್ಟೇ ಬರಬೇಕಿದೆ. ಶಂಶಾಬಾದ್ನಲ್ಲಿ ‘ದಿ ಇಂಡಿಯನ್ ಹೌಸ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಶೂಟ್ಗಾಗಿ ದೊಡ್ಡ ಟ್ಯಾಂಕರ್ ನಿರ್ಮಾಣ ಮಾಡಲಾಗಿತ್ತು. ಈ ಟ್ಯಾಂಕರ್ ಏಕಾಏಕಿ ಒಡೆದಿದೆ. ನೀರನ ಒತ್ತಡದಿಂದ ಟ್ಯಾಂಕರ್ ಒಡೆದಿರಬಹುದು ಎಂದು ಊಹಿಸಲಾಗಿದೆ. ಘಟನೆಯಲ್ಲಿ ಸಹಾಯಕ ಕ್ಯಾಮೆರಾಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಟ್ಯಾಂಕ್ನಿಂದ ನೀರು ಏಕಾಏಕಿ ಬಂದಿದ್ದರಿಂದ ಸಾಕಷ್ಟು ತೊಂದರೆಗಳು ಉಂಟಾದವು. ಸೆಟ್ ಪೂರ್ತಿ ನಾಶವಾಗಿದೆ. ಸಹಾಯಕ ಕ್ಯಾಮೆರಾಮೆನ್ ಜೊತೆಗೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನೂ ತಿಳಿದುಬಂದಿಲ್ಲ. ನಟ ನಿಖಿಲ್ ಕೂಡ ಸೆಟ್ನಲ್ಲಿ ಇದ್ದರು. ಆದರೆ, ಅವರಿಗೆ ಯಾವುದೇ ತೊಂದರೆ ಆಗಿಲ್ಲ.
‘ದಿ ಇಂಡಿಯನ್ ಹೌಸ್’ ಚಿತ್ರದ ಕಥೆ ಸ್ವಾತಂತ್ರ್ಯಪೂರ್ವ ವಿಚಾರವನ್ನು ಹೊಂದಿದೆ. ಲಂಡನ್ನಲ್ಲಿ ಇದ್ದ ಇಂಡಿಯನ್ ಹೌಸ್ನಲ್ಲಿ ನಡೆಯೋ ಲವ್ ಸ್ಟೋರಿಯ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿದೆ. ಈ ಸಿನಿಮಾಗೆ ರಾಮ್ ವಂಶಿ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಅಗರ್ವಾಲ್ ಹಾಗೂ ತೇಜ್ ನಾರಾಯಣ್ ಅಗರ್ವಾಲ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದಲ್ಲಿ ರಾಮ್ ಚರಣ್ ಕೂಡ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.