LATEST NEWS
ನಂತೂರು ಸರ್ಕಲ್ – ಇಬ್ಬರನ್ನು ಬಲಿ ಪಡೆದ ಟಿಪ್ಪರ್ ಲಾರಿ

ಮಂಗಳೂರು ಮಾರ್ಚ್ 18: ಟಿಪ್ಪರ್ ಲಾರಿಯೊಂದು ಸ್ಕೂಟರ್ ಮೇಲೆ ಹರಿದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ನಂತೂರು ಸರ್ಕಲ್ ನಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಇಬ್ಬರು ಸಿಗ್ನಲ್ ಕಾಯುತ್ತಿದ್ದ ವೇಳೆ ಏಕಾಏಕಿ ಬಂದ ಟಿಪ್ಪರ್ ಲಾರಿ ದ್ವಿಚಕ್ರ ವಾಹನದ ಮೇಲೆ ಹರಿದಿದ್ದು, ದ್ವಿಚಕ್ರದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರ, ನಗರದ ಸುಲ್ತಾನ್ ಬತ್ತೇರಿಯ ಸ್ಯಾಮ್ಯುಯೆಲ್ ಜೇಸುದಾಸ್ ಹಾಗೂ ಅವರ ಮಗನ ಪತ್ನಿಯ ದೊಡ್ಡಮ್ಮನ ಮಗಳು ತೊಕ್ಕೊಟ್ಟಿನ ಭೂಮಿಕಾ ) ಮೃತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೊಕ್ಕೊಟ್ಟಿನಿಂದ ಭೂಮಿಕಾ ಅವರನ್ನು ತಮ್ಮ ಸುಲ್ತಾನ್ ಬತ್ತೇರಿಯ ಮನೆಗೆ ಸ್ಯಾಮ್ಯುಯೆಲ್ ಅವರು ಕರೆದೊಯ್ಯುವಾಗ ದುರ್ಘಟನೆ ಸಂಭವಿಸಿದೆ.

ಸ್ಕೂಟರ್ ಹಾಗೂ ಟಿಪ್ಪರ್ ಗಳೆರಡೂ ಪಂಪ್‌ವೆಲ್‌ನಿಂದ ಕೆಪಿಟಿ ಕಡೆಗೆ ಸಂಚರಿಸುತ್ತಿದ್ದವು. ನಂತೂರು ವೃತ್ತದಲ್ಲಿ ಸಾಗುವಾಗ ಟಿಪ್ಪರ್ ಚಾಲಕನಿಗೆ ಎದುರಿನಲ್ಲಿ ಹೋಗುತ್ತಿದ್ದ ಸ್ಕೂಟರ್ ಸರಿಯಾಗಿ ಕಾಣಿಸಿರಲಿಲ್ಲ. ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿಯಾಗಿತ್ತು. ರಸ್ತೆ ಬಿದ್ದ ಸವಾರರ ಮೇಲೆಯೆ ಟಿಪ್ಪರ್ ಚಕ್ರ ಹಾದು ಹೋಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ನಡೆದ ಬೆನ್ನಲ್ಲೆ ಸ್ಥಳೀಯರು ಲಾರಿ ಚಾಲಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದು , ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ನಂತೂರಿನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.